12 ಲಕ್ಷ ರೂ. ಹಣ ದುರ್ಬಳಕೆ ಮಾಡಿ ಕಂಪೆನಿಗೆ ವಂಚನೆ ಆರೋಪ: ಆರು ಮಂದಿ ವಿರುದ್ಧ ಪ್ರಕರಣ ದಾಖಲು
ಮಣಿಪಾಲ : ಇಂಡಿಯಾಂಟಾ ಇ-ಮೊಬಿಲಿಟಿ ಕಂಪನಿಗೆ ಬರಬೇಕಿದ್ದ ಲಕ್ಷಾಂತರ ರೂ. ಹಣವನ್ನು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ದುರ್ಬಳಕೆ ಮಾಡಿಕೊಂಡು ವಂಚಿಸಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಎಂಐಟಿ ಕ್ಯಾಂಪಸ್‌ನಲ್ಲಿರುವ ಇಂಡಿಯಾಂಟಾ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ದಿವ್ಯ ಯತೀನ್ ಶೆಟ್ಟಿ ನಡೆಸುತ್ತಿದ್ದು, ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಮೂರ್ತಿ ಜಿ., ಶಿವರಾಜ್ ನಾಯಕ್, ಸುದೀಪ್, ಜಿತೇಶ್ ಎಲ್. ಕಾಂಚನ್, ಎಂ.ಬಿ. ಅವಿನಾಶ್ ಹಾಗೂ ಮುತ್ತಣ್ಣ ಅದಿನವರ್ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಆರೋಪಿಗಳು ಕಂಪನಿಗೆ ಬರಬೇಕಾದ ಪ್ರಯಾಣಿಕರ ಶುಲ್ಕವನ್ನು ಕಂಪನಿಯ ಕ್ಯೂಆರ್ ಕೋಡ್ ಮೂಲಕ ಪಾವತಿಸದೆ, ವೈಯಕ್ತಿಕ ಮರ್ಚೆಂಟ್ ಕ್ಯೂಆರ್ ಕೋಡ್ ಬಳಸಿಕೊಂಡು ಪ್ರಯಾಣಿಕರಿಂದ ಶುಲ್ಕ ಸಂಗ್ರಹಿಸಿದ್ದರು ಎನ್ನಲಾಗಿದೆ.
ಈ ರೀತಿಯಾಗಿ ಕಂಪನಿಗೆ ಬರಬೇಕಿದ್ದ ಒಟ್ಟು 12 ಲಕ್ಷ ರೂ. ವನ್ನು ಮುತ್ತಣ್ಣ ಅದಿನವರ್ ಅವರ ಪತ್ನಿ ಐಶ್ವರ್ಯ ಮುತ್ತಣ್ಣ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚನೆ ಹಾಗೂ ಮೋಸ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.