ಉಡುಪಿ : ಅಟೋಇಮ್ಯೂನ್ ಕಾಯಿಲೆಗಳ ಚಿಕಿತ್ಸೆ ಅತ್ಯಂತ ಸವಾಲಿನದ್ದಾಗಿದ್ದು, ‘ಕ್ಷಮತ್ವಂ’ ಸಮ್ಮೇಳನದಲ್ಲಿ ಅಟೋಇಮ್ಯೂನ್ ಕಾಯಿಲೆ ಗಳಿಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳು ಹಾಗೂ ದೃಷ್ಟಿಕೋನದಲ್ಲಿ ನಡೆದ ಚರ್ಚೆ ಅತ್ಯಂತ ಉಪಯುಕ್ತ ಎಂದು ಹೊಸದಿಲ್ಲಿಯ ಆಯುಷ್ ಸಚಿವಾಲಯದ ಅಖಿಲ ಭಾರತ ಆಯುರ್ವೇದ ಸಂಸ್ಥೆಯ (ಎಐಐಎ) ನಿರ್ದೇಶಕ ಪ್ರೊ.ಪ್ರದೀಪ್ ಕುಮಾರ್ ಪ್ರಜಾಪತಿ ಹೇಳಿದ್ದಾರೆ.

ಉದ್ಯಾವರ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಅಟೋಇಮ್ಯೂನ್ ಕಾಯಿಲೆಗಳ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಸಮ್ಮೇಳನದ ಕುರಿತು ವೈಜ್ಞಾನಿಕ ವರದಿ ಮಂಡಿಸಿದ ಡಾ.ಪದ್ಮಕಿರಣ್ ಅವರು, ದೇಶ-ವಿದೇಶಗಳಿಂದ 1,400ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದು, 26 ದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಒಟ್ಟು 522 ಸಂಶೋಧನಾ ಸಾರಾಂಶಗಳು ಮಂಡನೆಯಾಗಿದ್ದು, ಕೆಲವು ವಿಷಯಗಳ ಕುರಿತು ವಿಶೇಷ ಚರ್ಚೆಗಳು ನಡೆದವು ಎಂದರು.

ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಆಯುರ್ವೇದ ವಿಭಾಗದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಸಿದ್ಧನಗೌಡ ಪಾಟೀಲ್ ಮಾತನಾಡಿ, ಸಮ್ಮೇಳನದಲ್ಲಿ ಉಪಯುಕ್ತ ಚರ್ಚೆಗಳು ನಡೆದಿದ್ದು, ಇವುಗಳನ್ನು ಇಲ್ಲಿಯೇ ಬಿಡದೇ ಇನ್ನಷ್ಟು ವಿಸ್ತಾರವಾದ ಅಧ್ಯಯನ ನಡೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಬಂಧಗಳಿಗೆ ಪ್ರಶಸ್ತಿಗಳನ್ನು ಘೋಷಿಸಲಾಯಿತು. ದೇಶದ ವಿವಿಧ ಭಾಗಗಳ 27 ಕಾಲೇಜುಗಳ ಪ್ರತಿನಿಧಿಗಳು ಅತ್ಯುತ್ತಮ ಪ್ರಬಂಧಗಳ ಗೌರವಕ್ಕೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಸಮ್ಮೇಳನಕ್ಕೆ ವಿಶೇಷ ಕೊಡುಗೆ ನೀಡಿದ ಡಾ.ಪ್ರದೀಪ್ ಕುಮಾರ್ ಪ್ರಜಾಪತಿ ಹಾಗೂ ಡಾ.ಸಿದ್ದಣ್ಣಗೌಡ ಎ. ಪಾಟೀಲ್ ರನ್ನು ಸನ್ಮಾನಿಸಲಾಯಿತು.

ಎಸ್ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕ್ಲಿನಿಕಲ್ ವಿಭಾಗದ ಉಪ ಪ್ರಾಂಶುಪಾಲ ಡಾ.ನಿರಂಜನ್, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಪ್ರಸನ್ನ ಎನ್. ಮೊಗಸಾಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಶೈಕ್ಷಣಿಕ ವಿಭಾಗದ ಉಪಪ್ರಾಂಶುಪಾಲರಾದ ಡಾ.ನಾಗರಾಜ್ ಎಸ್. ಸ್ವಾಗತಿಸಿದರೆ, ಡಾ.ಎ.ಕುಮಾರ್ ವಂದಿಸಿದರು. ಡಾ.ಅರುಣ್ ಕುಮಾರ್ ಹಾಗೂ ಡಾ.ಶುಭಾ ಪಿ.ಯು. ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor