Malpe | ಹಳೆ ವಿದ್ಯಾರ್ಥಿ ಸಂಘಗಳು ಶಾಲೆಯ ಬೆನ್ನೆಲುಬು: ಜಯನ್ ಮಲ್ಪೆ
ಮಲ್ಪೆ : ಆದರ್ಶವನ್ನು ಬೋಧಿಸುವ ಕನ್ನಡ ಶಾಲೆಗಳು ಜಾಗತೀಕರಣಕ್ಕೆ ಸಿಲುಕಿಕೊಂಡಿದ್ದರೂ ಇದನ್ನು ಉಳಿಸುವಲ್ಲಿ ಹಳೆ ವಿದ್ಯಾರ್ಥಿ ಸಂಘಗಳು ಶಾಲೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಇಲ್ಲಿನ ಗಾಂಧಿ ಶತಾಬ್ದಿ ಸರಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಊಟದ ಬಟ್ಟಲಿನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಖಾಸಗಿ ಶಾಲೆಯಲ್ಲಿ ಹಣವಂತರ ಮಕ್ಕಳು ಪಡೆಯುತ್ತಿರುವ ಶಿಕ್ಷಣ ಪದ್ಧತಿಗೂ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡವರ ಮಕ್ಕಳ ಶಿಕ್ಷಣ ಪದ್ಧತಿಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಇಂತಹ ಸಂದರ್ಭದಲ್ಲಿ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಹಳೆ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ಗಾಂಧಿಶತಾಬ್ದಿ ಸರಕಾರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಶೋಕ್ ಎಸ್ ಕೋಟ್ಯಾನ್ ವಹಿಸಿದ್ದರು.
ಶಾಲೆಯ ಮಕ್ಕಳಿಗೆ ಸುಮಾರು 350 ಊಟದ ಬಟ್ಟಲನ್ನು ಉಚಿತವಾಗಿ ನೀಡಿದ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಹರಿಪ್ರಸಾದ್ ರೈ, ಮಾಜಿ ನಗರಸಭಾ ಸದಸ್ಯರಾದ ನವೀನ್ ಚಂದ್ರ, ಯಾದವ ಅಮೀನ್ ಕೊಳ, ಶಿಕ್ಷಣ ಸಂಯೋಜಕಿ ಹರ್ಷಿತ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಮುಖೋಪಾಧ್ಯಾಯ ಹರಿದಾಸ್ ಮಾಸ್ಟರ್, ರಮೇಶ್ ಮಾಸ್ಟರ್, ಹಳೆ ವಿದ್ಯಾರ್ಥಿ ಸಂಘದ ಶಾಂತರಾಮ ಪೈ, ಮಹಾಲಿಂಗ ಎಸ್ ಕೋಟ್ಯಾನ್, ಮಜೀದ್, ಎಸ್ಡಿಎಂಸಿ ಸದಸ್ಯರಾದ ಹರೀಶ್ ಸಲ್ಯಾನ್ ಮುಂತಾದವರು ಭಾಗವಹಿಸಿದ್ದರು.
ಗಣೇಶ್ ನೆರ್ಗಿ ಸ್ವಾಗತಿಸಿ, ಶಾಲಾ ಮುಖೋಪಾಧ್ಯಾಯನಿ ರತ್ನಾ ಕೆ. ವಂದಿಸಿದರು. ಪ್ರಭಾಕರ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು