ಸಿಟಿಬಸ್ ಟೈಮಿಂಗ್ಸ್ ವಿಚಾರದಲ್ಲಿ ಹಲ್ಲೆ: ಮೂವರು ವಶಕ್ಕೆ
ಉಡುಪಿ, ಜ.24: ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಜ.23ರಂದು ಬೆಳಗ್ಗೆ ಬಸ್ ಟೈಮಿಂಗ್ಸ್ ವಿಚಾರದಲ್ಲಿ ಪರಸ್ಪರ ಹಲ್ಲೆ ನಡೆಸುತ್ತಿದ್ದ ಚಾಲಕ ಹಾಗೂ ನಿರ್ವಾಹಕರನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಸೀಮಾ ಬಸ್ ಚಾಲಕ ವಿಖ್ಯಾತ್ ಮತ್ತು ನಿರ್ವಾಹಕ ಶರಣ್ ಹಾಗೂ ತನ್ವೀರ್ ಬಸ್ ನಿರ್ವಾಹಕ ಹೇಮಂತ್ ಎಂದು ಗುರುತಿಸ ಲಾಗಿದೆ. ಇವರು ಬಸ್ಸಿನ ಟೈಮಿಂಗ್ ವಿಚಾರಕ್ಕೆ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದು, ದೂಡಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಭಯದ ಮತ್ತು ಪ್ರಕ್ಷುಬ್ದ ವಾತಾವರಣ ಉಂಟು ಮಾಡಿದ್ದರೆಂದು ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೈಮಿಂಗ್ಸ್ ವಿಚಾರ: ಖಾಸಗಿ ಬಸ್ ಚಾಲಕನಿಗೆ ಮಾರಣಾಂತಿಕ ಹಲ್ಲೆ
ಉಡುಪಿ: ಬಸ್ ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕ ನೋರ್ವ, ಇನ್ನೊಂದು ಬಸ್ಸಿನ ಚಾಲಕನಿಗೆ ಸ್ಕೂ ಡ್ರೈವರ್‌ನಿಂದ ಚುಚ್ಚಿ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಜ.23ರಂದು ಸಂಜೆ 5ಗಂಟೆಗೆ ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಸ್ ನಿಲ್ದಾಣದಲ್ಲಿ ಬಸ್ ಟೈಮಿಂಗ್ ವಿಚಾರದಲ್ಲಿ ಸೆಲೀನ ಬಸ್ ಚಾಲಕನಾದ ಸದ್ದಾಂ ಮತ್ತು ನವದುರ್ಗಾ ಬಸ್ ಚಾಲಕ ರಿಯಾಝ್ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಆಗ ಸದ್ದಾಂ ಅವಾಚ್ಯ ಶಬ್ದಗಳಿಂದ ಬೈದು ಸ್ಕೂ ಡ್ರೈವರ್ ನಿಂದ ರಿಯಾಜ್ ಅವರ ಎಡಕಣ್ಣಿನ ಮೇಲ್ಬಾಗಕ್ಕೆ ಚುಚ್ಚಿದನು ಎನ್ನಲಾಗಿದೆ.
ಅಲ್ಲಿಂದ ತಪ್ಪಿಸಿಕೊಂಡ ರಿಯಾಝ್‌ನನ್ನು ಹಿಂಬಾಲಿಸಿಕೊಂಡು ಹೋದ ಸದ್ದಾಂ, ಅಡ್ಡಗಟ್ಟಿ ಕೊಲ್ಲುವ ಉದ್ದೇಶದಿಂದ ಸ್ಕೂ ಡ್ರೈವರ್‌ನಿಂದ ಮತ್ತೆ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ರಿಯಾಝ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.