ಜ.28: ವಿಶೇಷ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳಿಂದ ರಾಜ್ಯಮಟ್ಟದ ಸಾರ್ವತ್ರಿಕ ಮುಷ್ಕರ
ಉಡುಪಿ, ಜ.24: ರಾಜ್ಯದ ವಿಶೇಷ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಶು ಕೇಂದ್ರೀತ ಯೋಜನೆಯಡಿಯಲ್ಲಿ ಅನುದಾನ ಪಡೆಯುತ್ತಿರುವ ವಿಶೇಷ ಶಾಲೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಜ.28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರ್ವತ್ರಿಕ ಮುಷ್ಕರವನ್ನು ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷೆ ಡಾ.ಕಾಂತಿ ಹರೀಶ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘ ಹಾಗೂ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘಗಳ ನೇತೃತ್ವದಲ್ಲಿ ನಡೆ ಯುವ ಈ ಮುಷ್ಕರದಲ್ಲಿ ರಾಜ್ಯದ ಎಲ್ಲ 180 ಶಿಶು ಕೇಂದ್ರೀತ ಯೋಜನೆಯಡಿಯಲ್ಲಿ ಅನುದಾನ ಪಡೆಯುತ್ತಿರುವ ವಿಶೇಷ ಶಾಲೆಗಳು ಕೈಜೋಡಿಸಲಿವೆ ಎಂದರು.
ಪ್ರಮುಖ ಬೇಡಿಕೆಗಳು: ಸಮಾನ ಕೆಲಸಕ್ಕೆ ಸಮಾನ ವೇತನ ಎಂಬಂತೆ ಶಿಶು ಕೇಂದ್ರೀತ ಯೋಜನೆಯಡಿಯಲ್ಲಿ ಅನುದಾನ ಪಡೆಯುತ್ತಿರುವ ವಿಶೇಷ ಶಾಲೆಗಳ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿಗಳಿಗೆ 1982 ಅನುದಾನಕ್ಕೆ ಬರುವ ಸಿಬ್ಬಂದಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಈ ಹಿಂದೆ ವಿಧಾನಸಭಾ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ರಾಜ್ಯದ ವಿಶೇಷ ಶಾಲೆಗಳ ಅನುದಾನವನ್ನು ಶೇ.40ಕ್ಕೇರಿಕೆ ಮಾಡಿ ಸರಕಾರಕ್ಕೆ ನೀಡಿರುವ ಪ್ರಸ್ತಾವನೆಯನ್ನು ಕೂಡಲೇ ಮಂಜೂರು ಮಾಡಬೇಕು.
ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶದ ಪ್ರಕಾರ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ಒದಗಿಸಬೇಕು. ಶಿಶು ಕೇಂದ್ರೀತ ಸಹಾಯಧನ ಯೋಜನೆಗೆ ಸಂಬಂಧಿಸಿ ದಂತೆ ಇರುವ ಮಾರ್ಗದರ್ಶಿಯನ್ನು ಪ್ರತಿ 5 ವರ್ಷಕ್ಕೊಮ್ಮೆ ಪುನರ್ ರಚಿಸಿ ಆಯ್ದ ವಿಶೇಶ ಶಾಲೆಗಳ ಪರಿಣತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಿಶೇಷ ಶಾಲೆಗಳಿಗೆ ಇಲಾಖೆ ನೀಡುವ ಅನುದಾನವನ್ನು ಪ್ರತಿವರ್ಷ ಎರಡು ಕಂತು ಗಳಲ್ಲಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘದ ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಜಿಲ್ಲಾಧ್ಯಕ್ಷ ಎಚ್.ರವೀಂದ್ರ, ಕಾರ್ಯದರ್ಶಿ ಶಶಿಕಲಾ ಕೋಟ್ಯಾನ್, ಯೂನಸ್, ದಿಲ್‌ದಾರ್, ಕೌಸರ್ ಉಪಸ್ಥಿತರಿದ್ದರು.
‘ಏಳು ವಿಶೇಷ ಮಕ್ಕಳಿಗೆ ಒಬ್ಬರು ಅನುಪಾತದಂತೆ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿರುವ ಶಿಶು ಕೇಂದ್ರೀತ ಯೋಜನೆಯಡಿ ಯಲ್ಲಿ ಅನುದಾನ ಪಡೆಯುತ್ತಿರುವ 180 ವಿಶೇಷ ಶಾಲೆಗಳಲ್ಲಿ 3500 ಶಿಕ್ಷಕರು ಹಾಗೂ 2500ರೂ. ಶಿಕ್ಷಕೇತರರು ದುಡಿಯುತ್ತಿದ್ದು, ಇವರಲ್ಲಿ ಶಿಕ್ಷಕರಿಗೆ 20ಸಾವಿರ ರೂ., ಸಹಾಯಕರಿಗೆ 13ಸಾವಿರ ರೂ., ಅಡುಗೆ ಕೆಲಸದವರಿಗೆ 12ಸಾವಿರ ರೂ. ಗೌರವಧನ ನೀಡಲಾಗುತ್ತದೆ. ಆದರೆ ಸರಕಾರ ಅನುದಾನವು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಇವರಿಗೆ ವೇತನ ವಿಳಂಬವಾಗುತ್ತಿದೆ’
-ಡಾ.ಕಾಂತಿ ಹರೀಶ್, ರಾಜ್ಯಾಧ್ಯಕ್ಷರು.