ಬೈಂದೂರು| ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಜಟಾಪಟಿಗೆ ಕಾರಣವಾದ ಪಟ್ಟಣ ಪಂಚಾಯತ್ ಹೋರಾಟ
ಉಡುಪಿ, ಸೆ.23: ಬೈಂದೂರು ತಾಲೂಕು ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡಿದ್ದು, ಬೈಂದೂರು ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ, ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಮತ್ತು ಶಾಸಕ ಗುರುರಾಜ್ ಗಂಟಿ ಹೊಳೆ ಮಧ್ಯೆ ಮಣಿಪಾಲದಲ್ಲಿ ಜಟಾಪಟಿ ನಡೆದಿರುವ ಬಗ್ಗೆ ವರದಿಯಾಗಿದೆ.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅಧ್ಯಕ್ಷತೆಯಲ್ಲಿ ಜಿ.ಪಂ ಕಚೇರಿಯಲ್ಲಿ ನಡೆಯಲಿದ್ದ ದೀಶಾ ಸಭೆಗೆ ಮುನ್ನಾ ಮಣಿಪಾಲದ ಹೊಟೇಲ್‌ನಲ್ಲಿ ಬಿ.ವೈ.ರಾಘವೇಂದ್ರ ಸಮ್ಮುಖದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ಸಂಬಂಧ ಹೋರಾಟದ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಕೂಡ ಹಾಜರಿದ್ದರು.
ಶಾಸಕ ಗಂಟಿಹೊಳೆ ಪಟ್ಟಣ ಪಂಚಾಯತ್ ಹೋರಾಟದ ಬಗ್ಗೆ ಚಕಾರ ಎತ್ತಿದ್ದರೆನ್ನಲಾಗಿದೆ. ಇದಕ್ಕೆ ದೀಪಕ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇವರಿಬ್ಬರ ಮಧ್ಯೆ ವಾಗ್ವಾದ ನಡೆದು ಹೋಯ್ ಕೈ ಹಂತಕ್ಕೆ ತಲುಪಿತ್ತೆನ್ನ ಲಾಗಿದೆ. ಕೂಡಲೇ ಸಂಸದರು ಹಾಗೂ ಶಾಸಕ ಕೊಡ್ಗಿ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರೆಂದು ತಿಳಿದು ಬಂದಿದೆ.
ಇದೀಗ ಈ ವಿಚಾರ ಬಹಳಷ್ಟು ಚರ್ಚೆಗೆ ಕಾರಣವಾಗಿದ್ದು, ಬೈಂದೂರು ಬಿಜೆಪಿಯಲ್ಲಿನ ಭಿನ್ನಮತವನ್ನು ಮತ್ತಷ್ಟು ಗಾಢಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಊಹಾಪೋಹಗಳು ಹಬ್ಬಲು ಕೂಡ ಇದು ಕಾರಣವಾಗಿದೆ.