ಐದು ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತ: ರಾಜ್ಯ ಸರಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
ಕರಾವಳಿಗೆ ಘೋಷಿಸಿದ 35 ಸಾವಿರ ಕೋಟಿ ರೂ. ಅನುದಾನ ಎಲ್ಲಿದೆ? – ಕೇಂದ್ರ ಸಚಿವರ ಪ್ರಶ್ನೆ
ಉಡುಪಿ: ರಾಜ್ಯದ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿ ಜನರ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಪೂರ್ಣಗೊಳಿಸಿದೆ. ಆದರೆ ತನ್ನ ಸಾಧನೆಗಳನ್ನು ಚರ್ಚಿಸಲು ಸರಕಾರದ ಬಳಿ ಯಾವುದೇ ವಿಚಾರಗಳಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು ಐದು ಗ್ಯಾರಂಟಿಗಳನ್ನು ನೀಡಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಈ ಗ್ಯಾರಂಟಿಗಳ ಹೊರೆ ಯಾರ ಮೇಲೆ ಹಾಕಲಾಗುತ್ತಿದೆ? ಇದಕ್ಕಾಗಿ ರಾಜ್ಯ ಸರಕಾರದ ಕೊಡುಗೆ ಏನು? ರಾಜ್ಯದ ಜನರು ತಮ್ಮ ದುಡಿಮೆಯ ಮೂಲಕ ತೆರಿಗೆ ಪಾವತಿಸಿ ಖಜಾನೆ ತುಂಬಿಸುತ್ತಿದ್ದಾರೆ. ಹೀಗಾಗಿ ಜನರ ಕೊಡುಗೆಯೇ ದೊಡ್ಡದಾಗಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವೈಯಕ್ತಿಕ ಕೊಡುಗೆ ಏನೂ ಇಲ್ಲ ಎಂದು ಟೀಕಿಸಿದರು.
ವಿವಿಧ ವಲಯಗಳಲ್ಲಿ ತೆರಿಗೆ ಹೆಚ್ಚಿಸುವ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ. ರಾಜ್ಯದ ಜನರ ಹಣ ದುರ್ಬಳಕೆಯಾಗುತ್ತಿದೆ. ಐದು ಗ್ಯಾರಂಟಿಗಳ ಬಗ್ಗೆ ನನಗೆ ವಿರೋಧವಿಲ್ಲ. ಆದರೆ ಗ್ಯಾರಂಟಿಗಳ ಅನುಷ್ಠಾನದ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿ ಜನರ ಬದುಕನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಕರಾವಳಿ ಭಾಗದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 35 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಲಾಗಿತ್ತು. ಈ ಘೋಷಣೆ ಮಾಡಿ ಎರಡು-ಮೂರು ತಿಂಗಳು ಕಳೆದಿದ್ದರೂ ಅನುದಾನದ ಹಣ ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ. ಕೇವಲ ಘೋಷಣೆಗಳ ಮೂಲಕ ಕರಾವಳಿ ಜನರನ್ನು ತೃಪ್ತಿಪಡಿಸಲು ಸರಕಾರ ಮುಂದಾದರೆ ಕಾಂಗ್ರೆಸ್ ಪಕ್ಷ ಅದಕ್ಕೆ ತಕ್ಕ ಪ್ರಾಯಶ್ಚಿತ್ತ ಅನುಭವಿಸಲು ಸಿದ್ಧವಾಗಿರಬೇಕು ಎಂದು ಎಚ್ಚರಿಸಿದರು.
ಕುಮಾರಸ್ವಾಮಿಗೆ ಹೊಟ್ಟೆ ಉರಿ, ಸುಳ್ಳೇ ಅವರ ಮನೆದೇವರು ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ರಾಜ್ಯ ಸರಕಾರವೇ ಜನರಿಗೆ ಸುಳ್ಳು ಮತ್ತು ಮೋಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬರಗಾಲ ಹಾಗೂ ಬಿತ್ತನೆ ಬೀಜದ ಸಮಸ್ಯೆಯಿಂದ ರಾಜ್ಯದ ರೈತರಿಗೆ ಭಾರಿ ನಷ್ಟವಾಗಿದ್ದು, ಒಟ್ಟಾರೆ 62 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ತಿಳಿಸಿದರು. ಈ ನಷ್ಟಕ್ಕೆ ಪರಿಹಾರ ನೀಡುವಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ ಎಂದರು.
ಹಾಸನಾಂಬೆ ದೇವಾಲಯದ ಮೂಲಕ 29 ಕೋಟಿ ರೂ. ಸಂಗ್ರಹವಾಗಿದೆ. 2025ರಲ್ಲಿ ಬಸ್ ಪ್ರಯಾಣ ದರವನ್ನು ಶೇ.35ರಷ್ಟು ಹೆಚ್ಚಿಸಲಾಗಿದ್ದು, ಇದೀಗ ಮತ್ತೆ ಶೇ.45ರಷ್ಟು ಏರಿಕೆ ಮಾಡಲಾಗಿದೆ. ಅಬಕಾರಿ ಇಲಾಖೆಯಿಂದ ಸುಮಾರು 40 ಸಾವಿರ ಕೋಟಿ ರೂ. ಆದಾಯ ಸಂಗ್ರಹಿಸಲಾಗುತ್ತಿದೆ. ಭಾರತ್ ಜೋಡೋ ವಿಚಾರದಲ್ಲಿ ತೋರುವ ಕಾಳಜಿ ರೈತರ ಸಮಸ್ಯೆಗಳ ವಿಚಾರದಲ್ಲಿ ಕಾಣಿಸುತ್ತಿಲ್ಲ ಎಂದು ಟೀಕಿಸಿದರು.
ಕಬ್ಬು ಬೆಳೆಗಾರರು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದುವರೆಗೂ ರಾಜ್ಯ ಸರಕಾರ ಕಬ್ಬು ಬೆಳೆಗಾರರ ನೆರವಿಗೆ ಬಂದಿಲ್ಲ. ಸಮರ್ಪಕ ನೀರು ಹಂಚಿಕೆಯಾಗದ ಕಾರಣ ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿದೆ. ಒಂದೆಡೆ ರೈತರು ನಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಸಕ್ಕರೆ ಕಾರ್ಖಾನೆಗಳ ಕೆಲವು ಮಾಲಕರು ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಿದ್ದಾರೆ. ರೈತರಿಗೆ ನಷ್ಟವಾಗುತ್ತಿರುವ ಸಂದರ್ಭದಲ್ಲಿ ಕಾರ್ಖಾನೆ ಮಾಲಕರು ಇಷ್ಟೊಂದು ವೈಭವದ ಜೀವನ ನಡೆಸುತ್ತಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಹಳ ವರ್ಷಗಳ ಬಳಿಕ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದೇನೆ. ಕರಾವಳಿ ಪ್ರದೇಶ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳ ಸಂಗಮವಾಗಿದೆ. ನಮ್ಮ ಕುಟುಂಬ ದೇವರಲ್ಲಿ ನಂಬಿಕೆ ಇಟ್ಟಿರುವ ಕುಟುಂಬ. ನಾಡಿನಲ್ಲಿ ಎದುರಾಗಿರುವ ಸಂಕಷ್ಟ ಹಾಗೂ ಬರಗಾಲ ನಿವಾರಣೆಯಾಗಲಿ ಎಂಬ ಉದ್ದೇಶದಿಂದ ದೇವಿಗೆ ಪೂಜೆ ಸಲ್ಲಿಸಿದ್ದೇನೆ ಎಂದರು.