ಕಾರ್ಕಳ : ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸೂಚನೆಯಂತೆ ಪಕ್ಷದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಭಾಗವಾಗಿ, ಕೆಪಿಸಿಸಿ ನಿರ್ದೇಶನದ ಮೇರೆಗೆ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ‘ಸಂಘಟನ್ ಸೃಜನ್ ಅಭಿಯಾನ-2’ ಕಾರ್ಯಕ್ರಮವು ಇಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ವಿಧಾನ ಪರಿಷತ್ ಸದಸ್ಯ ಹಾಗೂ ಸಂಘಟನ್ ಸೃಜನ್ ಅಭಿಯಾನದ ಉಸ್ತುವಾರಿ ಐವನ್ ಡಿ’ಸೋಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪಕ್ಷದ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ಮನ್ನಣೆ ನೀಡುವುದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಐಸಿಸಿ ನಿರ್ದೇಶನದಂತೆ ಪ್ರತಿಯೊಂದು ಬ್ಲಾಕ್ ಮಟ್ಟದಲ್ಲಿಯೂ ಸಮಿತಿಯು ಕಾರ್ಯನಿರ್ವಹಿಸುತ್ತಿದೆ ಎಂದರು.

ಅಭಿಯಾನದ ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಪಕ್ಷದ ನಾಯಕತ್ವ ವಹಿಸಿಕೊಳ್ಳಲು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಈ ಪ್ರಕ್ರಿಯೆಯಿಂದ ಪ್ರತಿಯೊಬ್ಬರಿಗೂ ಅವಕಾಶ ದೊರೆಯಲಿದೆ ಎಂದು ಹೇಳಿದರು.

ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಈ ಅಭಿಯಾನವು ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸಲು ಅನುಕೂಲವಾಗಲಿದೆ ಎಂದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ನೇಮಕಗೊಂಡಿರುವ ಹಿರಿಯ ಕಾಂಗ್ರೆಸ್ಸಿಗ ಹಾಗೂ ಖ್ಯಾತ ನ್ಯಾಯವಾದಿ ಶೇಖರ ಮಡಿವಾಳ ಅವರನ್ನು ಈ ಸಂದರ್ಭದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳಕೆಬೈಲ್, ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ನಿಯೋಗದ ಸದಸ್ಯರಾದ ಶಾಲೆಟ್ ಪಿಂಟೋ, ಅಬ್ದುಲ್ ರವೂಫ್ ಮೊದಲಾದವರು ಉಪಸ್ಥಿತರಿದ್ದರು.

ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಚಾರ ಸಮಿತಿ ಅಧ್ಯಕ್ಷ ಅನಿಲ್ ಪೂಜಾರಿ ಮಾಳ ವಂದಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮುಹಮ್ಮದ್ ಶರೀಫ್ ಕಾರ್ಕಳ

contributor