ಕುಂದಾಪುರ, ನ.16: ಅನುದಾನಿತ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಕಲಿಕೆಗೆ ಸರಕಾರದ ಅನುಮತಿ ಹಾಗೂ ಅನುದಾನ ಕೊಡಿಸಬೇಕು. ಅನುದಾನಿತ ಶಾಲಾ ಮಕ್ಕಳಿಗೂ ಸರಕಾರದ ಉಚಿತ ಸಮವಸ್ತ್ರ, ಶೂ, ಶಾಕ್ಸ್ ಸಿಗಬೇಕು ಎಂಬಿತ್ಯಾದಿ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸೋಮವಾರ ಕೊಲ್ಲೂರಿ ನಲ್ಲಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರಿಗೆ ಬೈಂದೂರು ತಾಲೂಕು ಅನುದಾನಿತ ಶಿಕ್ಷಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ ನೂರಾರು ಹುದ್ದೆಗಳಿಗೆ ಆಡಳಿತ ಮಂಡಳಿಗಳು ಶಿಕ್ಷಕರ ನೇಮಿಸಲು ಅನುಮೋದನೆ ನೀಡುವ ಪ್ರಕ್ರಿಯೆ ಸರಳಗೊಳಿಸಬೇಕು. 2006ಕ್ಕಿಂತ ಮೊದಲು ನೇಮಕ ಗೊಂಡ ಹಾಗೂ ಅನಂತರದ ಅನುದಾನಿತ ಶಿಕ್ಷಕರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಅಥವಾ ಸೂಕ್ತ ನಿವೃತ್ತಿ ವೇತನದ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರಕಾರದ ಸ್ಪಷ್ಟ ಆದೇಶ ಹೊರಡಿಸಲು ಕ್ರಮ, ಅನುದಾನಿತ ಶಾಲಾ ಶಿಕ್ಷಕರು ಹಾಗೂ ಸಿಬಂದಿಗೂ ಆರೋಗ್ಯ ಸಂಜೀವಿನಿ ವಿಮಾ ಸೌಲಭ್ಯ ಜಾರಿಗೊಳಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಅನುದಾನಿತ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ತಾಲೂಕು ಸಂಘದ ಪ್ರಮುಖರು, ಶಿಕ್ಷಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor