×
Ad

ಸಾಣೂರು ರಾ.ಹೆದ್ದಾರಿ ಅಸಮರ್ಪಕ ತಡೆಗೋಡೆ: ಗುಡ್ಡ ಕುಸಿತದ ಭೀತಿ

Update: 2025-05-21 18:25 IST

ಕಾರ್ಕಳ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ_ 169ರ ಸಾಣೂರು ಪದ್ಮನಾಭ ನಗರದ ಗುಡ್ಡದ ಮೇಲಿನ ದೊಡ್ಡ ದೊಡ್ಡ ಕಲ್ಲುಗಳು ಹಾಗೂ ಮಣ್ಣು ಸರ್ವಿಸ್ ರಸ್ತೆಗೆ ಬೀಳುತ್ತಿದೆ. ಇದೇ ರೀತಿ ಮಳೆ ಮುಂದುವರೆದರೆ ಈ ಗುಡ್ಡ ಕುಸಿಯುವ ಭೀತಿ ಸ್ಥಳೀಯರಿಗೆ ಎದುರಾಗಿದೆ.

ಕಳೆದ ಎರಡು ವರ್ಷಗಳ ಗ್ರಾಮಸ್ಥರ ನಿರಂತರ ಹೋರಾಟದ ಪರಿಣಾಮ ಹೆದ್ದಾರಿ ಇಲಾಖೆ ಈ ಗುಡ್ಡದ ತುದಿಯಲ್ಲಿರುವ ಹೈಟೆನ್ಶನ್ ಟವರ್ ಇರುವ ಹಿನ್ನೆಲೆಯಲ್ಲಿ ಗುಡ್ಡದ ಎತ್ತರದ ಅರ್ಧ ಭಾಗದವರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಿತ್ತು. ಆದರೆ ಈ ತಡೆಕೋಡೆಯ ಮೇಲ್ಭಾಗಕ್ಕೆ ಕೇವಲ ಮಣ್ಣು ತುಂಬಿಸಿ ಅಸಮರ್ಪಕ ಕಾಮಗಾರಿ ನಡೆಸಲಾಗಿತ್ತು ಎಂದು ಗ್ರಾಮಸ್ಥರು ದೂರಿದ್ದರು.

ಇದೀಗ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದ ಮೇಲಿನ ಕಲ್ಲುಗಳು ಹಾಗೂ ಮಣ್ಣು ಸರ್ವಿಸ್ ರಸ್ತೆಗೆ ಬೀಳುತ್ತಿರುವುದರಿಂದ ಇಲ್ಲಿ ಸಾಗುವ ವಾಹನ ಗಳಿಗೆ ಮತ್ತು ನಡೆದಾಡುವ ಗ್ರಾಮಸ್ಥರಿಗೆ ಅಪಾಯ ಎದುರಾಗಿದೆ. ಒಂದೆರಡು ದಿನದ ಮಳೆಗೆ ಈ ಪರಿಸ್ಥಿತಿಯಾದರೆ, ಮುಂದೆ ನಿರಂತರವಾಗಿ ಸುರಿಯುವ ಮುಂಗಾರು ಮಳೆಗೆ ಈ ಗುಡ್ಡದ ಮಣ್ಣು ಜರಿದು ರಸ್ತೆಗೆ ಬಿದ್ದು ಇನ್ನಷ್ಟು ಅಪಾಯವಾಗುವ ಸಂಭವವಿದೆ ಎನ್ನುತ್ತಾರೆ ಸ್ಥಳೀಯರು.

ಈಗಾಗಲೇ ಕುಸಿಯುವ ಭೀತಿಯಿಂದ ಜನರು ಈ ರಸ್ತೆಯಲ್ಲಿ ಒಡಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಕೂಡಲೇ ಕಾರ್ಯಪ್ರವರ್ತರಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಾಣೂರು ಯುವಕ ಮಂಡಲದ ಆಟದ ಮೈದಾನದ ಅಂಚಿಗೆ ತಡೆಗೋಡೆಯನ್ನು ವಿಸ್ತರಣೆ ಮಾಡುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸ ಲಾಗಿದೆ ಎಂದು ಹೇಳಲಾಗಿದೆ. ಆದರೂ ಈವರೆಗೆ ತಡೆಗೂಡೆ ವಿಸ್ತರಣಾ ಕಾರ್ಯಕ್ಕೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಕೇವಲ ಜನರ ಒತ್ತಡಕ್ಕೆ ಮಣಿದು ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಅರೆಬರೆ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಇದೀಗ ಇಲಾಖೆಗೆ ಪರಿಸರದ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೂಡಲೇ ಗುಡ್ಡದ ಮಣ್ಣು ರಸ್ತೆಗೆ ಬೀಳದಂತೆ ಸುರಕ್ಷಿತವಾಗಿ ತಡೆಗೋಡೆ ಕಾಮಗಾರಿಯನ್ನು ಸಂಪೂರ್ಣಗೊಳಿಸದಿದ್ದರೆ ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಾಣೂರು ಗ್ರಾಮಸ್ಥರ ಭಾರಿ ಜನಾಕ್ರೋಶಕ್ಕೆ ತುತ್ತಾಗಬೇಕಾಗಿದೀತು’ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News