ಗಗನಸಖಿ ಐನಾಝ್ ಮೇಲಿನ ಅಸೂಯೆ ಕೊಲೆಗೆ ಕಾರಣ: ಎಸ್ಪಿ ಡಾ.ಅರುಣ್
ಎಸ್ಪಿ ಡಾ.ಅರುಣ್
ಉಡುಪಿ : ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ, ಏರ್ ಇಂಡಿಯಾ ಸಿಬ್ಬಂದಿ ಪ್ರವೀಣ್ ಅರುಣ್ ಚೌಗುಲೆ (39)ಗೆ ಸಹೋದ್ಯೋಗಿ ಗಗನಸಖಿ ಐನಾಝ್ ಮೇಲಿನ ಅಸೂಯೆ ಮತ್ತು ದ್ವೇಷವೇ ಈ ಕೊಲೆಗೆ ಕಾರಣ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಕೊಲೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ನ.14ರಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ನ.15ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿತ್ತು.
ಅದರಂತೆ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿ, ಮಹಜರು ಕಾರ್ಯ ನಡೆಸಿದ್ದಾರೆ. ಈತ ಈಗಾಗಲೇ ಕೊಲೆಗೆ ಎರಡು, ಮೂರು ಕಾರಣಗಳನ್ನು ತಿಳಿಸಿದ್ದು, ಒಟ್ಟಾರೆಯಾಗಿ ಆತ ಐನಾಝ್‌ಳನ್ನು ಅತಿಯಾಗಿ ಹಚ್ಚಿಕೊಂಡು ಆಕೆ ತನ್ನ ನಿಯಂತ್ರಣದಲ್ಲಿಯೇ ಇರಬೇಕೆಂಬ ಮನಸ್ಥಿತಿಯಿಂದ ಈ ಕೊಲೆ ಮಾಡಿದ್ದಾನೆ ಎಂದು ಎಸ್ಪಿ ತಿಳಿಸಿದ್ದಾರೆ.
ಸಾಕಷ್ಟು ಸಾಕ್ಷ್ಯ ಸಂಗ್ರಹ ಹಾಗೂ ಮಾಹಿತಿಗಳನ್ನು ಪಡೆಯುವ ನಿಟ್ಟಿನಲ್ಲಿ ಪೊಲೀಸರು ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಆತ ಕೊಲೆಯ ಸಂದರ್ಭ ಡ್ರಗ್ಸ್ ಸೇವಿಸಿದ್ದಾನೆಯೇ ಅಥವಾ ಆತ ಡ್ರಗ್ಸ್ ವ್ಯಸನಿಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ ಬಳಸಿದ ಚೂರಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿಯೂ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.