ಕಾರ್ಕಳ: ಶಾಸಕ ಸುನಿಲ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪೋಸ್ಟರ್ ಅಭಿಯಾನ; ಪೊಲೀಸರಿಂದ ತಡೆ, ಪ್ರತಿಭಟನಾಕಾರರು ವಶಕ್ಕೆ
ಕಾರ್ಕಳ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ರಾಜ್ಯ ಸಚಿವರಾಗಿದ್ದ ನಾಗೇಂದ್ರ ಅವರ ರಾಜೀನಾಮೆ ವಿಚಾರವನ್ನು ಮುಂದಿಟ್ಟುಕೊಂಡು, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪೋಸ್ಟರ್ ಅಭಿಯಾನಕ್ಕೆ ಪೊಲೀಸರು ತಡೆ ನೀಡಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೀಟ್ ಪರೀಕ್ಷೆಯಲ್ಲಿನ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ವಾಲ್ಮೀಕಿ ನಿಗಮದ ಹಗರಣ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ನೀಡಿರುವುದನ್ನು ಉಲ್ಲೇಖಿಸಿದ ಕಾಂಗ್ರೆಸ್, ನಕಲಿ ಪರಶುರಾಮನ ಮೂರ್ತಿ ನಿರ್ಮಾಣ ಹಾಗೂ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿ ಶಾಸಕ ಸುನಿಲ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
ಇಂದು ಬೆಳಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಜಮಾಯಿಸಿ, ಶಾಸಕರ ಮನೆಗೆ ಪೋಸ್ಟರ್ ಅಂಟಿಸಲು ತೆರಳುತ್ತಿದ್ದ ವೇಳೆ ಸರ್ವಜ್ಞ ವೃತ್ತದ ಬಳಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದರು.
ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ‘ಸುನಿಲ್ ಕುಮಾರ್ ರಾಜೀನಾಮೆ ನೀಡಲೇಬೇಕು’ ಎಂದು ಘೋಷಣೆ ಕೂಗಿ ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು. ಪೋಸ್ಟರ್ ಅಭಿಯಾನವನ್ನು ಇಂದು ಅಥವಾ ನಾಳೆಗೆ ಮಾತ್ರ ಸೀಮಿತಗೊಳಿಸದೆ, ಮುಂದಿನ ದಿನಗಳಲ್ಲಿಯೂ ಮುಂದುವರಿಸಿ ಶಾಸಕರ ಮನೆಗೆ ಪೋಸ್ಟರ್ ಅಂಟಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಜಮಾಯಿಸಿದ ಬಿಜೆಪಿ ಕಾರ್ಯಕರ್ತರು
ಕಾಂಗ್ರೆಸ್‌ನ ಪೋಸ್ಟರ್ ಅಭಿಯಾನಕ್ಕೆ ಬಿಜೆಪಿ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ್ದು, ಶಾಸಕರ ಮನೆ, ಕಚೇರಿ ಹಾಗೂ ಬಿಜೆಪಿ ಕಚೇರಿ ಬಳಿ ಜಮಾಯಿಸಿದ್ದಾರೆ. ವಿವಿಧೆಡೆಗಳಿಂದ ಬಿಜೆಪಿ ಕಾರ್ಯಕರ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪೊಲೀಸರ ಸರ್ಪಗಾವಲು
ಪೋಸ್ಟರ್ ಅಭಿಯಾನಕ್ಕೆ ತಡೆ ನೀಡುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಯುವ ಕಾಂಗ್ರೆಸ್ ಅಧ್ಯಕ್ಷ ಸೂರಾಜ್ ಶೆಟ್ಟಿ ನಕ್ರೆ, ಸುಧಾಕರ ಶೆಟ್ಟಿ ಮುಡಾರು, ಪುರಸಭೆ ಮಾಜಿ ಅಧ್ಯಕ್ಷ ಸುಭಿತ್ ಎನ್.ಆರ್., ಮಾಜಿ ಸದಸ್ಯ ವಿವೇಕಾನಂದ ಶೆಣೈ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.