ಉಡುಪಿ: ಎಲ್‌ಐಸಿ ವಿಭಾಗೀಯ ಕಚೇರಿಯಲ್ಲಿ ವಿಮಾ ಸಪ್ತಾಹ
ಉಡುಪಿ, ಸೆ.1: 1956ರ ಸೆ.1ರಂದು ಕೇವಲ ಐದು ಕೋಟಿ ರೂ. ಬಂಡವಾಳದೊಂದಿಗೆ ಪ್ರಾರಂಭಗೊಂಡ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಇಂದು ಜನತೆಯ ವಿಶ್ವಾಸಾರ್ಹ ಸಂಸ್ಥೆಯಾಗಿ ಪ್ರಗತಿ ಕಂಡಿದ್ದು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಎಲ್‌ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್. ಭಟ್ ಹೇಳಿದ್ದಾರೆ.
ಅಜ್ಜರಕಾಡಿನಲ್ಲಿರುವ ಉಡುಪಿಯ ಎಲ್‌ಐಸಿ ವಿಭಾಗೀಯ ಕಚೇರಿಯಲ್ಲಿ ಮಂಗಳವಾರ ನಡೆದ ವಿಮಾ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ದೀಪ ಬೆಳಗಿಸುವ ಮೂಲಕ ವಿಮಾ ಸಪ್ತಾಹ ಉದ್ಘಾಟಿಸಿ, ಜಿಲ್ಲೆಯಾದ್ಯಂತ ಸಂಚರಿಸುವ ಎಲ್‌ಐಸಿ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಅವರು ಸಭಾ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.
ದೇಶದ ಅಂದಿನ 245 ವಿವಿಧ ಕಂಪೆನಿಗಳನ್ನು ಒಗ್ಗೂಡಿಸಿ ಕೇಂದ್ರ ಸರಕಾರ ಎಲ್‌ಐಸಿ ಎಂಬ ಏಕೈಕ ವಿಮಾ ಕಂಪೆನಿಯನ್ನು ಪ್ರಾರಂಭಿಸಿತ್ತು. ಜನರಲ್ಲಿ ಉಳಿತಾಯ ಪ್ರಜ್ಞೆ ಮೂಡಿಸುವುದರ ಜೊತೆಗೆ ದೇಶದ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವ ಧ್ಯೇಯದೊಂದಿಗೆ ಸಂಸತ್ತಿನಲ್ಲಿ ಮಸೂದೆ ಮೂಲಕ ಸರಕಾರ ಎಲ್‌ಐಸಿಯನ್ನು ಪ್ರಾರಂಭಿಸಿದೆ.
ಇಂದು ಸರಕಾರಕ್ಕೆ ಅತಿಹೆಚ್ಚು ಲಾಭಾಂಶವನ್ನು ಪ್ರತಿವರ್ಷ ನೀಡುತ್ತಿರುವ ಸಂಸ್ಥೆ ಎಲ್‌ಐಸಿಯಾಗಿದೆ. ದೇಶದ ಅಭಿವೃದ್ಧಿಗಾಗಿ 47 ಲಕ್ಷ ಕೋಟಿ ರೂ.ಗಳನ್ನು ಪಂಚವಾರ್ಷಿಕ ಯೋಜನೆಯಲ್ಲಿ ಬಂಡವಾಳವಾಗಿ ಹೂಡಿಕೆ ಮಾಡಿದೆ. ಅಲ್ಲದೇ ದೇಶದ ಹಲವು ಮಹತ್ವದ ಯೋಜನೆಗಳಿಗೆ ಹಣಕಾಸಿನ ಸಹಕಾರ ನೀಡಿದೆ. ರಾಜ್ಯ ಕೈಗಾ ಅಣುವಿದ್ಯುತ್ ಘಟಕ ಹಾಗೂ ಆಲಮಟ್ಟಿ ಯೋಜನೆಗಳು ಇದಕ್ಕೆ ಉದಾಹರಣೆಗಳಾಗಿವೆ ಎಂದು ಅವರು ಹೇಳಿದರು.
ಕಳೆದ ಆರ್ಥಿಕ ವರ್ಷದಲ್ಲಿ ಎಲ್‌ಐಸಿ ಉಡುಪಿ ವಿಭಾಗ ಗಮನಾರ್ಹ ಸಾಧನೆ ಮಾಡಿದ್ದು, 1,33,316 ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ 508.7 ಕೋಟಿ ಪ್ರಥಮ ಪ್ರೀಮಿಯಂ ಆದಾಯ ಗಳಿಸಿದೆ. ವಿಮಾ ಕ್ರೈಮ್ ಪಾವತಿಯಲ್ಲಿ ಶೇ.99.44ರ ಸಾಧನೆ ಎಲ್‌ಐಸಿಯದ್ದಾಗಿದೆ ಎಂದು ಗಣಪತಿ ಭಟ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಅಶೋಕ್ ಬಾಂಡಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಲ್‌ಐಸಿ ಪ್ರಬಂಧಕ (ಮಾರುಕಟ್ಟೆ) ಗುರುದಾಸ್ ಎಸ್. ರಾವ್ ಉಪಸ್ಥಿತರಿದ್ದರು.
ಎಲ್‌ಐಸಿ ಪ್ರಬಂಧಕ (ಸೇಲ್ಸ್) ದುರ್ಗಾರಾಮ್ ಶೆಣೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಾರುಕಟ್ಟೆ ವಿಭಾಗದ ಉಪಶ್ರೇಣಿ ಸಹಾಯಕ ಬಾಲಕೃಷ್ಣ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶೀಘ್ರವೇ ಸೇವಾನಿವೃತ್ತ ರಾಗಲಿರುವ ಉದ್ಯೋಗಿಗಳನ್ನು ಗೌರವಿಸಲಾಯಿತು. ವಿಮಾ ಸಪ್ತಾಹದ ಸಮಾರೋಪ ಸಮಾರಂಭ ಸೆ.7ರಂದು ನಡೆಯಲಿದೆ.