ಕಾಪು: ಕೈಗಾರಿಕೆಗಾಗಿ ಸಾವಿರಾರು ಎಕರೆ; ಬಡವರ ಮನೆ ನಿವೇಶನಕ್ಕಿಲ್ಲ ಜಾಗ
ಕಾಪು, ಜ.4: ಯುಪಿಸಿಎಲ್, ಸುಜ್ಲಾನ್, ಐಎಸ್ಪಿಆರ್‌ಎಲ್ ಸೇರಿದಂತೆ ದೊಡ್ಡ ದೊಡ್ಡ ಕೈಗಾರಿಕಾ ಘಟಕಗಳ ಸ್ಥಾಪನೆಗೆ, ವಿಸ್ತರಣೆಗೆ ಸಾವಿರಾರು ಎಕರೆ ಭೂಮಿಯನ್ನು ನೀಡಿರುವ ಕಾಪು ತಾಲೂಕಿನಲ್ಲಿ, ಬಡವನೊಬ್ಬ ಸ್ವಂತ ಮನೆ ಕಟ್ಟಿಕೊಳ್ಳಲು ಆಶೆಪಟ್ಟರೆ ಸರಕಾರದ ಬಳಿ ಜಾಗದ ಕೊರತೆ ಅಥವಾ ಇಚ್ಛಾಶಕ್ತಿಯ ಕೊರತೆ ಕಂಡುಬರುತ್ತಿದೆ.
ಹೀಗಾಗಿ ಕಾಪು ತಾಲೂಕಿನಲ್ಲಿ ಬಡವರಿಗೆ ಸೂರು ಕಲ್ಪಿಸಲು ನಿವೇಶನ ಇಲ್ಲದೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ತಲೆಯ ಮೇಲೊಂದು ಸ್ವಂತ ಸೂರಿನ ಕನಸು ಕಾಣುತ್ತಾ ಹಲವು ವರ್ಷಗಳಿಂದ ಕಾಯುತಿದ್ದಾರೆ.
ಕಾಪು ಪುರಸಭೆ ಹಾಗೂ 16 ಗ್ರಾಮ ಪಂಚಾಯಿತಿಯನ್ನು ಹೊಂದಿರುವ ಕಾಪು ತಾಲೂಕಿನಲ್ಲಿ ಒಟ್ಟು 3825 ಮಂದಿ ನಿವೇಶನ ರಹಿತರ ಪಟ್ಟಿ ಇದೆ. ಆದರೆ ನಿವೇಶನ ಹಂಚಲು ಜಾಗದ ಕೊರತೆ ಹಾಗೂ ಕೆಲವೊಂದು ತಾಂತ್ರಿಕ ಕಾರಣಗಳಿಂದ ಜಾಗ ನೀಡಲು ಆಗದೆ ಬಾಕಿಯಾಗಿದೆ.
ನಿವೇಶನ ರಹಿತರ ವಿವರ: ಕಾಪು ಪುರಸಭೆಯಲ್ಲಿ-113, ಉಚ್ಚಿಲ ಬಡಾ ಗ್ರಾಪಂ-227, ಬೆಳಪು- 171, ಬೆಳ್ಳೆ- 363, ಹೆಜಮಾಡಿ- 225, ಇನ್ನಂಜೆ- 62, ಕಟಪಾಡಿ- 113, ಕೋಟೆ- 148, ಕುರ್ಕಾಲು- 170, ಕುತ್ಯಾರು- 97, ಮಜೂರು- 240, ಮುದರಂಗಡಿ- 173, ಪಡುಬಿದ್ರಿ- 663, ಪಲಿಮಾರು- 337, ಶಿರ್ವ- 258, ಎರ್ಮಾಳು ತೆಂಕ- 218, ಎಲ್ಲೂರು- 247 ಸೇರಿ ಒಟ್ಟು 3825 ನಿವೇಶನ ರಹಿತರಿದ್ದಾರೆ.
ಇವರೆಲ್ಲರೂ ಹಲವು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ನಿವೇಶನ ಸಿಗದೆ ಇಂದು ಸಿಗಬಹುದು ನಾಳೆ ಸಿಗಬಹುದು ಎಂಬ ನಿರೀಕ್ಷೆ ಯಲ್ಲಿದ್ದಾರೆ. ಇವರು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ನಡೆಸಿದ ಬಳಿಕ ಸೂಕ್ತ ನಿವೇಶನ ರಹಿತರ ಪಟ್ಟಿ ಅಧಿಕಾರಿಗಳು ಸಿದ್ಧಪಡಿಸಲಿದ್ದಾರೆ.
ಎಲ್ಲೆಲ್ಲಿ ಜಾಗ: ನಿವೇಶನ ರಹಿತರಿಗೆ ಜಾಗ ನೀಡಲು ಬೆಳ್ಳೆಯ ಕಟ್ಟಿಂಗೇರಿಯಲ್ಲಿ ಐದು ಎಕರೆ ಜಾಗವಿದೆ. ಪಲಿಮಾರಿನಲ್ಲಿ ಐದು ಎಕರೆಯ ಜಾಗವಿದ್ದರೂ, ಇದರಲ್ಲಿ ನಂದಿಕೂರಿನಿಂದ ವಿವಿಧ ಕಡೆಗಳಿಗೆ ವಿದ್ಯುತ್ ಟವರ್ ಹಾಗೂ ತಂತಿಗಳ ಸಂಪರ್ಕ ಇರುವುದರಿಂದ ಈ ಸ್ಥಳವನ್ನು ಹೊರತು ಪಡಿಸಿ ಎರಡು ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಇದರ ಸರ್ವೇ ಕಾರ್ಯ ಇನ್ನಷ್ಟೆ ಅಗಬೇಕಾಗಿದೆ.
ಮುದರಂಗಡಿಯಲ್ಲೂ ಐದು ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸರ್ವೇ ಕಾರ್ಯ ಬಾಕಿ ಇವೆ. ಶಿರ್ವದಲ್ಲಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ಜಾಗ ಗುರುತಿಸುವ ಪ್ರಕ್ರಿಯೆ ಬಾಕಿಯಾಗಿವೆ.
ಕೈಗಾರಿಕಾ ವಲಯಗಳು: ಕಾಪು ತಾಲೂಕಿನಲ್ಲಿ ಬೃಹತ್ ಉದ್ದಿಮೆಗಳಾದ ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕ (ಐಎಸ್ಪಿಆರ್‌ಎಲ್), ಕಲ್ಲಿದ್ದಲು ಆಧಾರಿತ ಅದಾನಿ ಪವರ್ ಕಾರ್ಪೊರೇಷನ್, ಪಡುಬಿದ್ರಿಯಲ್ಲಿ ವಿಶೇಷ ಅರ್ಥಿಕ ವಲಯದೊಂದಿಗೆ ಮಧ್ಯಮ, ಸಣ್ಣ, ಭಾರಿ ಗಾತ್ರದ ಕೈಗಾರಿಕೆಗಳು, ನಂದಿಕೂರು, ಬೆಳಪುವಿನಲ್ಲಿ ಕೈಗಾರಿಕಾ ಪಾರ್ಕ್ ಕಾರ್ಯಾಚರಿಸುತ್ತಿವೆ.
ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿಮಿಟೆಡ್ ಎರಡನೇ ಹಂತದ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ಕೈಬಿಟ್ಟಿದ್ದು, ಇದರಿಂದ ಅದಾನಿ ಯೋಜನೆಯ ಎರಡನೇ ಹಂತದ ವಿಸ್ತರಣೆಗೆ ನೀಡಲಾದ 546 ಎಕರೆ ಭೂಮಿ ಈಗ ಮರಳಿ ಕೆಐಎಡಿಬಿ ಕೈವಶದಲ್ಲಿದೆ.
ಯುಪಿಸಿಎಲ್‌ನಿಂದ ಮರಳಿ ಬಂದ ಜಮೀನಿಗಾಗಿ ಹಲವು ಯೋಜನೆಗಳು ಕಾದು ಕುಳಿತಿವೆ. ಅದನ್ನು ವಿಸ್ತರಿತ ಕೈಗಾರಿಕಾ ಪ್ರದೇಶವಾಗಿ ಮಾಡಲು ಜಿಲ್ಲಾಡಳಿತ ಉದ್ದೇಶಿಸಿದೆ. ವಿಮಾನ ನಿಲ್ದಾಣಕ್ಕೆ ಅಥವಾ ಕ್ರಿಕೆಟ್ ಸ್ಟೇಡಿಯಂಗೆ ಈ ಭೂಮಿಯನ್ನು ಪಡೆಯಲು ಪ್ರಯತ್ನಗಳು ಮೇಲ್ಮಟ್ಟದಲ್ಲಿ ನಡೆಯುತ್ತಿವೆ. ಕೊನೆಗೆ ಈ ಜಾಗವನ್ನು ಯಾವ ಯಾವ ಉದ್ದೇಶಗಳಿಗೆ ವಿಲೇವಾರಿ ಮಾಡಲು ಸರಕಾರ ನಿರ್ಧರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
‘ಕಾಪು ತಾಲೂಕು ಸೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9800 ನಿವೇಶನ ರಹಿತರ ಬೇಡಿಕೆ ಇದೆ. ಸರಕಾರ ತಲಾ 2.75 ಸೆಂಟ್ಸ್ ಜಾಗವನ್ನು ಬಡವರಿಗೆ, ನಿವೇಶನ ರಹಿತರಿಗೆ ನೀಡುತ್ತದೆ. ಆದರೆ ಈ ಬಗ್ಗೆ ಪ್ರತೀ ವಿಧಾನಸಭೆ ಯಲ್ಲೂ ಮಾತನಾಡಿದ್ದೇನೆ. ಈ ಬಗ್ಗೆ ಪ್ರಯತ್ನ ಮುಂದುವರಿದಿದೆ. ಡೀಮ್ಡ್ ಫಾರೆಸ್ಟ್, ಗೋಮಾಳ, ಹೊಳೆ ಬದಿ, ಕುಮ್ಕಿ ಜಾಗವನ್ನು ನೀಡದೆ ಇರಲು ಸರಕಾರದ ಆದೇಶವಿದೆ. ಬಡವರ ಪಾಲಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕುಮ್ಕಿ ಜಾಗ ನೀಡಲು ಸರ್ಕಾರ ಆದೇಶದಲ್ಲಿ ಕೆಲವೊಂದು ಬದಲಾವಣೆ ಮಾಡಲು ಸರಕಾರ ಪೂರಕವಾಗಿ ಸ್ಪಂಧಿಸಬೇಕು. ಇದರಿಂದ ಬಡವರ ಸೂರಿನ ಕನಸು ನನಸಾಗಿಸಲು ಸಾಧ್ಯ. ಇದೊಂದು ಪುಣ್ಯದ ಕೆಲಸ. ಸಾವಿರಾರು ಜನ ಕಾಯುತಿದ್ದಾರೆ. ಮುಖ್ಯಮಂತ್ರಿಗಳು, ಅಧಿಕಾರಿಗಳು ಈ ಬೇಡಿಕೆಗೆ ಆದ್ಯತೆ ಮೇಲೆ ಸ್ಪಂದಿಸಬೇಕಿದೆ.
-ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕ.