×
Ad

ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆ| ಜ್ಞಾನ, ಶಿಸ್ತು, ಯಶಸ್ವಿ ಭವಿಷ್ಯಕ್ಕೆ ಅಡಿಪಾಯ: ಡಾ. ಶರತ್ ರಾವ್

Update: 2025-12-31 17:00 IST

​ಕಾರ್ಕಳ,‌ : "ವಿದ್ಯಾರ್ಥಿಗಳ ಜೀವನದಲ್ಲಿ ಜ್ಞಾನ, ಶಿಸ್ತು ಮತ್ತು ಆತ್ಮೋನ್ನತಿಯ ಪರಿಚಯವೇ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಅಡಿಪಾಯವಾಗಿದೆ ಎಂದು ಮಾಹೆ ಮಣಿಪಾಲ ಸಹ ಕುಲಪತಿ ಡಾ. ಶರತ್ ರಾವ್ ಹೇಳಿದರು.

ಅಜೆಕಾರು ​ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್‌ , ಜ್ಞಾನಸುಧಾ ಶಿಕ್ಷಣ ಸಂಸ್ಥೆ ವತಿಯಿಂದ ಶನಿವಾರ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ 'ಸಂಸ್ಥಾಪಕರ ದಿನಾಚರಣೆ'ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಹಂತದಲ್ಲಿ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ತಂಡಕಾರ್ಯ ಹಾಗೂ ಉತ್ತಮ ಸಂವಹನ ಕೌಶಲ್ಯಗಳು ಅತ್ಯಗತ್ಯ. ಜ್ಞಾನವು ಎಲ್ಲೆಡೆ ಲಭ್ಯವಿರುವ ಇಂದಿನ ಕಾಲದಲ್ಲಿ ಅದನ್ನು ಸರಿಯಾದ ರೀತಿಯಲ್ಲಿ ಬಳಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಶಿಕ್ಷಕರು ಮತ್ತು ಪೋಷಕರು ಪರಸ್ಪರ ಕೈಜೋಡಿಸಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಯಲು ಸಾಧ್ಯ. ಜ್ಞಾನಸುಧಾ ಸಂಸ್ಥೆಯು ಶಿಸ್ತು ಮತ್ತು ನೈತಿಕತೆಯ ಮೂಲಕ ದೇಶಕ್ಕೆ ಆಸ್ತಿಯಾಗುವ ನಾಗರಿಕರನ್ನು ರೂಪಿಸುತ್ತಿದೆ ಎಂದು ಅವರು ಪ್ರಶಂಸಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ, ಸುನಿಲ್ ಕುಮಾರ್ ಕೇವಲ ಕಟ್ಟಡಗಳಿಂದ ಶಿಕ್ಷಣ ಸಂಸ್ಥೆಗಳು ಶ್ರೇಷ್ಠವೆನಿ ಸುವುದಿಲ್ಲ, ಅಲ್ಲಿನ ವಿದ್ಯಾರ್ಥಿಗಳು ಪಡೆಯುವ ಸಂಸ್ಕಾರ ಮತ್ತು ಮೌಲ್ಯಗಳಿಂದ ಸಂಸ್ಥೆಯ ಘನತೆ ಹೆಚ್ಚುತ್ತದೆ. ಜ್ಞಾನಸುಧಾ ಶಿಕ್ಷಣ ಸಂಸ್ಥೆ ಡಾ! ಸುಧಾಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಜ್ಞಾನವನ್ನಷ್ಟೇ ನೀಡದೆ, ಬದುಕು ಕಟ್ಟಿಕೊಡುವ ಮತ್ತು ಜೀವನದ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಸ್ಬಾಗತಿಸಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ನೈತಿಕತೆ ಮತ್ತು ಸಂಸ್ಕಾರದ ಅರಿವು ಮೂಡಿಸುವುದು ಇಂದಿನ ಕಾಲಘಟ್ಟದ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜ್ಞಾನಸುಧಾ ಸಂಸ್ಥೆಯು ಪ್ರತಿಭೆ ಮತ್ತು ಜ್ಞಾನಕ್ಕೆ ವೇದಿಕೆ ನೀಡುವುದರ ಜೊತೆಗೆ, ಮೌಲ್ಯಾಧಾರಿತ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದೆ ಎಂದರು‌.

ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ 227 ವಿದ್ಯಾರ್ಥಿಗಳನ್ನು, ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ, ಐ.ಐ.ಎಸ್.ಸಿ,‌ ಎನ್.ಐ.ಟಿಗಳಿಗೆ ಪ್ರವೇಶ ಪಡೆದ 12 ವಿದ್ಯಾರ್ಥಿಗಳನ್ನು ಮತ್ತು ಎನ್.ಡಿ.ಎ ಪರೀಕ್ಷೆಯಲ್ಲಿ ಸಾಧನೆಗೈದವರನ್ನು ಸಮ್ಮಾನಿಸಲಾಯಿತು.ಇಂಜಿನಿಯರಿಂಗ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಒಂದು ಸಾವಿರದೊಳಗಿನ ಶ್ರೇಯಾಂಕ ಪಡೆದ 41 ವಿದ್ಯಾರ್ಥಿಗಳನ್ನು ಹಾಗೂ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರನ್ನು ಗೌರವಿಸಲಾಯಿತು.

ಮೂಡುಬಿದಿರೆ ಬನ್ನಡ್ಕ ಎಸ್ ಕೆಎಫ್ ಛೇರ್ಮೆನ್ ಡಾ! ಜಿ. ರಾಮಕೃಷ್ಣ ಆಚಾರ್ , ಜ್ಞಾನಸುಧಾ ಸಂಸ್ಥೆ ಪೂರ್ವ ವಿದ್ಯಾರ್ಥಿ, ಗೂಗಲ್ ಇಂಜಿನಿಯರ್ ಸಂಕೇತ್ ಜಿ.ಬಿ. ಮಾತನಾಡಿದರು. ಟ್ರಸ್ಟಿ ಅನಿಲ್ ಕುಮಾರ್ ಜೈನ್ ವಂದಿಸಿ , ಉಪನ್ಯಾಸಕಿ ಸಂಗೀತಾ ಕುಲಾಲ್ ನಿರೂಪಿಸಿದರು.

​ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ‌ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 171 ವಿದ್ಯಾರ್ಥಿಗಳ ಪರವಾಗಿ ಒಟ್ಟು 3.42 ಲಕ್ಷ ರೂ. ಭಾರತೀಯ ಸೇನೆಗೆ ಧನಸಹಾಯ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News