ಜ.3: ಸಾಧಕ ದೃಶಾ ಕೊಡಗುಗೆ ಸಾರ್ವಜನಿಕ ಅಭಿನಂದನೆ
ಉಡುಪಿ, ಡಿ.30:ಜೇಸಿಐ ಉಡುಪಿ ಸಿಟಿ, ವನಸುಮ ಟ್ರಸ್ಟ್ ಹಾಗೂ ವನಸುಮ ವೇದಿಕೆಗಳ ಸಹಯೋಗದಲ್ಲಿ ಇದೇ ಜ.3ರಂದು ಸಂಜೆ 5:30ಕ್ಕೆ ನಗರದ ಹೊಟೇಲ್ ಶಾರದಾ ಇಂಟರ್‌ನೇಷನಲ್ ಸಭಾಂಗಣದಲ್ಲಿ ಸಾಧಕ ದೃಶಾ ಕೊಡಗು ಇವರಿಗೆ ‘ರಿವಾರ್ಡ್ ಟು ಅವಾರ್ಡ್’ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಬಾಸುಮ ಕೊಡಗು ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೃಶಾ ಕೊಡಗು ಅವರು ಉಜ್ವಲ್ ಕಾಮತ್ ಅವರೊಂದಿಗೆ ‘ಹಿಂಸೆ ನಿಲ್ಲಿಸಿ’ ಎಂಬ ಘೋಷವಾಖ್ಯದೊಂದಿಗೆ ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿ.ಮೀ. ಜಾಗೃತಿ ಬೈಕ್ ರ್ಯಾಲಿ ನಡೆಸಿದ್ದರು.
ಅವರ ಈ ಸಾಧನೆಗಾಗಿ ಇತ್ತೀಚೆಗೆ ಇಂಡಿಯಾ ಬುಕ್ ಆಫ್ ರೆಕಾಡ್ಸ್ ಮತ್ತು ಏಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಜಾಗತಿಕ ದಾಖಲೆಯನ್ನು ಬರೆದರು. ಈ ಸಾಧನೆಗಾಗಿ ಅವರನ್ನು ಜ.3ರಂದುಇ ಸಾರ್ವಜನಿಕವಾಗಿ ಅಭಿನಂದಿಸ ಲಾಗುವುದು. ಅವರೊಂದಿಗೆ ಉಜ್ವಲ್‌ರನ್ನೂ ಸನ್ಮಾನಿಸಲಾಗುತ್ತಿದೆ ಎಂದು ಬಾಸುಮ ಕೊಡಗು ತಿಳಿಸಿದರು.
ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆ 317ಸಿಯ ರಂಜನ್ ಕಲ್ಕೂರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿಶಾಸಕ ಲಾಲಾಜಿ ಮೆಂಡನ್, ಉದ್ಯಮಿ ಲಂಚುಲಾಲ್ ಕೆ.ಎಸ್., ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಹಾಗೂ ನಗರಾಭಿವೃದ್ಧಿ ಪ್ರಾದಿಕಾರದ ದಿನಕರ್ ಹೇರೂರು ಉಪಸ್ಥಿತರಿರುವರು ಎಂದರು.
ಇವರೊಂದಿಗೆ 9 ವಿಶ್ವದಾಖಲೆ ಮಾಡಿದ ಮಂಗಳೂರಿನ ಆದಿಸ್ವರೂಪ ಅವರನ್ನೂ ಸನ್ಮಾನಿಸಲಾಗುತ್ತದೆ. ಸಭೆಯಲ್ಲಿ ಕಟ್ಟೆಮಾರ್ ಚಿತ್ರತಂಡ ಸಹ ಉಪಸ್ಥಿತವಿರುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೇಸಿಐ ಉಡುಪಿ ಸಿಟಿ ಘಟಕಾಧ್ಯಕ್ಷೆ ಪಲ್ಲವಿ ಕೊಡಗು, ವೇದಿಕೆ ಅಧ್ಯಕ್ಷ ವಿನಯ ಆಚಾರ್ಯ ಮುಂಡ್ಕೂರು, ಸೋನಿ ಪ್ರಭುದನ್, ಸಂದೀಪ್ ಮಂಜಾ ಉಪಸ್ಥಿತರಿದ್ದರು.