×
Ad

ಬಾಳಿಗಾ ಆಸ್ಪತ್ರೆಯಲ್ಲಿ 35ನೇ ಮದ್ಯವ್ಯಸನ ವಿಮುಕ್ತಿ ಶಿಬಿರ

Update: 2025-12-30 21:33 IST

ಉಡುಪಿ, ಡಿ.30: ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ 2026ರ ಜನವರಿ 1ರಿಂದ 10ರವರೆಗೆ 35ನೇ ಮದ್ಯವ್ಯಸನ ವಿಮುಕ್ತಿ ವಸತಿ ಶಿಬಿರ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ತಿಳಿಸಿದ್ದಾರೆ.

ಮುಂಬಯಿಯ ಮಕಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಬಾರಿಯ ಮದ್ಯವ್ಯಸನ ಶಿಬಿರ ನಡೆಯಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜ.1ರಂದು ಬೆಳಗ್ಗೆ 10:30ಕ್ಕೆ ಶಿಬಿರವನ್ನು ಸಮಾಜಸೇವಕ ವಿಶು ಶೆಟ್ಟಿ ಉದ್ಘಾಟಿಸಲಿದ್ದಾರೆ. ಶಿಬಿರದ ಸಮಾರೋಪ ಸಮಾರಂಭ ಜ.10ರಂದು ಬೆಳಿಗ್ಗೆ 10:30ಕ್ಕೆ ನಡೆಯಲಿದೆ ಎಂದವರು ಹೇಳಿದರು.

ಶಿಬಿರಕ್ಕೆ ಶಿಬಿರಾರ್ಥಿಗಳಿಗೆ ತಗಲುವ ಊಟ, ವಸತಿ, ಚಿಕಿತ್ಸೆಯ ವೆಚ್ಚವನ್ನು ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಭರಿಸುತ್ತಿದೆ. ಶಿಬಿರಾರ್ಥಿಗಳಲ್ಲಿ ಕಂಡುಬರುವ ದೈಹಿಕ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಅನುಗುಣವಾದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪ್ರತಿದಿನ ಶಿಬಿರಾರ್ಥಿಗಳಿಗೆ ಮದ್ಯ ಹಾಗೂ ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮಗಳು ಮತ್ತು ಜೀವನ ಶೈಲಿ ಬದಲಾವಣೆ ಕುರಿತು ನುರಿತ ತಜ್ಞರಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಸಂಜೆ ವಿವಿಧ ಮನೋರಂಜನೆ ಕಾರ್ಯಕ್ರಮಗಳು ಸಹ ನಡೆಯಲಿವೆ ಎಂದು ವಿವರಿಸಿದರು.

ಚಿಕಿತ್ಸೆಯಲ್ಲಿ ಪ್ರತಿದಿನ ಅನಾಮಿಕ ಅಮಲಿಗಳ ಸದಸ್ಯರಿಂದ ಒಂದು ಗಂಟೆಯ ಚರ್ಚೆ ಮತ್ತು ಮದ್ಯ ವಿಮುಕ್ತ ಜೀವನ ನಡೆಸುವ ಬಗ್ಗೆ ಮಾಹಿತಿ ನೀಡಿ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ರಾತ್ರಿ 7ರ ನಂತರ ಪ್ರತಿದಿನ ಭಜನೆ ಮತ್ತು ಧಾರ್ಮಿಕ ವಿಚಾರಗಳ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶಿಬಿರ ಮುಗಿಸಿ ತೆರಳಿದ ಬಳಿಕವೂ ಶಿಬಿರಾರ್ಥಿಗಳ ಪ್ರಗತಿಯನ್ನು ನಮ್ಮ ಸಮುದಾಯ ಕಾರ್ಯಕರ್ತರು ಮನೆ ಭೇಟಿ, ದೂರವಾಣಿ ಕರೆ ಮತ್ತು ಪತ್ರಗಳನ್ನು ಬರೆಯುವ ಮೂಲಕ ಅವರ ಮದ್ಯಮುಕ್ತ ಜೀವನವನ್ನು ನಿರಂತರವಾಗಿ ಪರಿಶೀಲಿಸುತ್ತಾರೆ. ಇದರೊಂದಿಗೆ ಒಂದು ವರ್ಷದ ಅವಧಿಯವರೆಗೆ ಮರು ಭೇಟಿ ದಿನಾಂಕವನ್ನು ನಿರ್ಧರಿಸಿ ಪ್ರತಿ ತಿಂಗಳು ಶಿಬಿರಾರ್ಥಿಗಳನ್ನು ಪರೀಕ್ಷಿಸಲಾಗುವುದು.

ಜ.1ರ ಉದ್ಘಾಟನೆ ಸಮಾರಂಭದಲ್ಲಿ ಮದ್ಯವ್ಯಸನದಿಂದ ಮುಕ್ತರಾದ ಐವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರಕ್ಕೆ ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಅವಕಾಶವಿದೆ. ಮಹಿಳೆಯರಿಗಾಗಿ ಪ್ರತ್ಯೇಕ ವಾರ್ಡ್‌ನ್ನು ಪ್ರಾರಂಭಿಸಲಾಗಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ನಾಗರಾಜ ಮೂರ್ತಿ, ಡಾ. ಮಾನಸ್, ಡಾ.ದೀಪಕ್ ಮಲ್ಯ ಮತ್ತು ಪದ್ಮ ನಾಗರಾಜ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News