‘ಇದ್ದತ್’ ಚಿತ್ರ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ
ಕುಂದಾಪುರ, ನ.24: ಯಾಕೂಬ್ ಖಾರ್ದ ಗುಲ್ವಾಡಿ ಅವರ ಕಥೆ, ನಿರ್ದೇಶನದ ಬ್ಯಾರಿ ಭಾಷೆಯ ಕಲಾತ್ಮಕ ಚಿತ್ರ ‘ಇದ್ದತತ’ ಪ್ರತಿಷ್ಠಿತ 32ನೇ ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ(ಕೆಐಎಫ್ಎಫ್)ಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.
ಡಿ.16ರಿಂದ 23 ರವರೆಗೆ ಕೋಲ್ಕತ್ತಾದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ಇಂಡಿಯನ್ ಅನ್ಹರ್ಡ್ ಲಾಂಗ್ವೇಜಸ್, ಅನ್ ಸಂಗ್ ಇನ್ ಕ್ರೆಡಿಬಲ್ ಇಂಡಿಯಾ - ಭಾರತದ ಸ್ವಲ್ಪ ತಿಳಿದಿರುವ ಭಾಷೆಗಳ (ಬ್ಯಾರಿ ಭಾಷೆ) ವಿಭಾಗದಲ್ಲಿ ಈ ಚಿತ್ರ ವಿಶೇಷ ಪ್ರದರ್ಶನಗೊಳ್ಳಲಿದೆ. ಈ ಬಗ್ಗೆ ಉತ್ಸವದ ನಿರ್ದೇಶಕಿ ಶರ್ಮಿಷ್ಠಾ ಬ್ಯಾನರ್ಜಿ ಅವರು ಅಧಿಕೃತ ಪತ್ರದ ಮೂಲಕ ತಿಳಿಸಿದ್ದಾರೆ.
ಈ ಚಿತ್ರವನ್ನು ಬೆಂಗಳೂರಿನ ಮಹರ್ಷಿ ಪ್ರೊಡಕ್ಷನ್ಸ್ ಅಡಿಯಲ್ಲಿ ಹೆಚ್.ಎಂ. ನರೇಂದ್ರ ಬಾಬು ನಿರ್ಮಿಸಿದ್ದಾರೆ. ಹಲವು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರಗಳಿಗೆ ಕೆಲಸ ಮಾಡಿರುವ ವೆಂಕಟರಮಣ ಸ್ವಾಮಿ ಈ ಸಿನಿಮಾಗೆ ಛಾಯಾಗ್ರಹಣವಿದೆ. ಚಿತ್ರಕಥೆ ಯಾಕೂಬ್ ಖಾದರ್ ಗುಲ್ವಾಡಿ - ರಮೇಶ್ ಗುಲ್ವಾಡಿ, ಸಂಭಾಷಣೆ ಆಯಿಷಾ ಫರ್ಝಾನಾ, ಸಂಕಲನ ಮುತ್ತುರಾಜ್. ಟಿ, ಸಂಗೀತ ನಚಿಕೇತ್ ಶರ್ಮಾ ಅವರದ್ದು.
ಈ ವರ್ಷದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ರೂಪಾ ವರ್ಕಾಡಿ, ರಾಜ್ಯ ಪ್ರಶಸ್ತಿ ವಿಜೇತ ನಟ ಎಂ.ಕೆ.ಮಠ ಉಪ್ಪಿನಂಗಡಿ, ಸ್ಥಳೀಯ ನೀನಾಸಂ ಕಲಾವಿದರಾದ ವಾಸುದೇವ ಗಂಗೇರ, ಚಿನ್ನ ವಿ. ಗಂಗೇರ, ಹಲವು ಕಲಾತ್ಮಕ ಸಿನಿಮಾಗಳಲ್ಲಿ ನಟಿಸಿರುವ ಗುಲ್ವಾಡಿಯ ಅಮೀರ್ ಹಂಝ, ಜಮಾಲ್ ಕುದ್ರಿಮಕ್ಕಿ, ಫಹದ್ ಯಾಕೂಬ್, ರವಿಕಿರಣ್ ಮುರ್ಡೇರ್ಶ್ವ, ಆಶಾ ಸುಳ್ಯ, ಫಹಿಮತುಲ್ ಯುಶ್ರ ಸೇರಿದಂತೆ ಅನೇಕ ಸ್ಥಳೀಯ ಕಲಾವಿದರು ಅಭಿನಯಿಸಿದ್ದಾರೆ.