ಕುಂದಾಪುರ ಪಂಚಗಂಗಾವಳಿ ಹೊಳೆಯಲ್ಲಿ ಕೆಂಪುಬಣ್ಣದ ತ್ಯಾಜ್ಯ ನೀರು !
ರಾಸಾಯನಿಕ ನೀರಿನಿಂದ ಜಲಚರಗಳಿಗೆ ಅಪಾಯ: ಮೀನುಗಾರರ ಆತಂಕ
ಕುಂದಾಪುರ, ನ.25: ಕುಂದಾಪುರ ಪುರಸಭೆ ವ್ಯಾಪ್ತಿಯ ಬಹದ್ದೂರ್ ಷಾ ವಾರ್ಡ್‌ನ ಸಂಗಮ್ ಸೇತುವೆ ಅಡಿ ಭಾಗದಲ್ಲಿನ ನದಿ ನೀರಿನಲ್ಲಿ ಕೆಂಪು ಬಣ್ಣದ ತ್ಯಾಜ್ಯ ನೀರು ಹರಿಯುತ್ತಿರುವುದು ಕಂಡುಬಂದಿದ್ದು, ಜಲಚರಗಳಿಗೆ ಅಪಾಯ ತಂದೊಡ್ಡುವ ಈ ತ್ಯಾಜ್ಯ ನೀರಿನ ಬಗ್ಗೆ ಸ್ಥಳೀಯರು ಹಾಗೂ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಗಮ್ ಸೇತುವೆ ಕೆಳಗೆ(ರಿಂಗ್ ರಸ್ತೆ ಬಳಿ) ಪೈಪ್ ಮೂಲಕ ನದಿಯಲ್ಲಿ ಕಡು ಕೆಂಪು ಬಣ್ಣದ ಎಣ್ಣೆ ಪದಾರ್ಥದಂತಹ ಅಂಶ ಮಿಶ್ರಣವಾಗಿರುವ ತ್ಯಾಜ್ಯ ನೀರು ಅಡಿಯಿಂದ ಬುಗ್ಗೆಯಂತೆ ಎದ್ದು ಹರಿಯುತ್ತಿರುವುದನ್ನು ಗಮನಿಸಿದ ಮೀನುಗಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಧ್ಯಾಹ್ನದವರೆಗೂ ಇದೇ ರೀತಿಯಾದ ನೀರು ಹರಿಯುತ್ತಿ ರುವುದು ಕಂಡುಬಂದಿದೆ.
ಪಂಜರ ಕೃಷಿಗೆ ಅಪಾಯ: ಇಲ್ಲಿಗೆ ಸಮೀಪವೇ ನದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಪಂಜರಮೀನು ಕೃಷಿ ಮಾಡಿದ್ದು ನೀರನ್ನು ಕಂಡು ಮೀನುಗಾರರು ಭೀತಿಗೊಂಡಿದ್ದಾರೆ.
ಬಹುತೇಕ ಪಂಜರಗಳಿಗೆ ಮೀನು ಮರಿಗಳನ್ನು ಬಿಡಲಾಗಿದ್ದು ಅವುಗಳು ಬೆಳವಣಿಗೆ ಹಂತದಲ್ಲಿದೆ. ಹಲವು ಪಂಜರ ಗಳಲ್ಲಿ ಹಾರವೆಸ್ಟಿಂಗ್(ಕಟಾವು) ಸಿದ್ಧವಿರುವ ಮೀನುಗಳಿವೆ ಎಂದು ಪಂಜರ ಮೀನು ಕೃಷಿಕರಾದ ಚೇತನ ಖಾರ್ವಿ, ಶ್ರೀಕಾಂತ ಖಾರ್ವಿ, ರಾಜೇಶ್ ಖಾರ್ವಿ, ಸಂತೋಷ ಖಾರ್ವಿ, ದಯಾನಂದ ಖಾರ್ವಿ ತಿಳಿಸಿದರು.
ಕೈಯಿಂದ ಲಕ್ಷಾಂತರ ರೂ. ಹಣ ಹಾಕಿ ಪಂಜರಕೃಷಿ ಮಾಡಲಾಗುತ್ತಿದೆ. ರಾಸಯನಿಕ, ಮಲೀನಯುಕ್ತ ನೀರಿನ ಕಾರಣದಿಂದ ಪಂಜರದಲ್ಲಿರುವ ಮೀನು, ಮರಿಗಳಿಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿದೆ. ಈ ನೀರು ಗಬ್ಬು ನಾರುತ್ತಿದ್ದು ಪರಿಸರದ ನಿವಾಸಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ತಕ್ಷಣ ಸಂಬಂದಪಟ್ಟವರು ಕ್ರಮವಹಿಸ ಬೇಕು. ಆಸ್ಪತ್ರೆ, ಹೊಟೇಲ್ ಸಹಿತ ಇತರೆ ತ್ಯಾಜ್ಯಗಳು ಸೇರಿರುವ ಸಾಧ್ಯತೆಗಳಿದ್ದು ಈ ನೀರನ್ನು ವೈಜ್ಞಾನಿಕ ಪರೀಕ್ಷೆಗೆ ಕಳಿಸಬೇಕು. ನದಿಗೆ ನೀರು ಬಿಡದಂತೆ ಸೂಕ್ತ ಕ್ರಮವಹಿಸಬೇಕೆಂದು ಸ್ಥಳೀಯರಾದ ವಿಘ್ನೇಷ್ ಆಗ್ರಹಿಸಿದ್ದಾರೆ.
ಶಾಶ್ವತ ಕ್ರಮಕ್ಕೆ ಒತ್ತು: ಮುಖ್ಯಾಧಿಕಾರಿ
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ. ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು.
‘ಕೆಂಪುಬಣ್ಣದ ನೀರು ಹರಿಯುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದು ಅಧಿಕಾರಿಗಳನ್ನು ನಿಯೋಜಿಸಿ ನಾಲ್ಕು ಹಂತಗಳಲ್ಲಿ ತಪಾಸಣೆ ಮಾಡಲು ಸೂಚಿಸಲಾಗಿದೆ. ಯಾರು ನೀರು ಹರಿಸುತ್ತಿದ್ದಾರೆಂದು ಪತ್ತೆ ಮಾಡಿ ಕ್ರಮ ವಹಿಸಲಾಗುತ್ತದೆ. ರಾಜ್ಯ ಸರಕಾರದ ಅನುದಾನದಲ್ಲಿ ಪುರಸಭೆ ವ್ಯಾಪ್ತಿಯ ಮದ್ದುಗುಡ್ಡೆ, ಪೆರ್ರಿ ರಸ್ತೆ, ಸಂಗಮ್ ಬ್ರಿಡ್ಜ್ ಅಡಿಭಾಗದಲ್ಲಿ ಐ ಆಂಡ್ ಡಿ ಯೋಜನೆಯಡಿ 7.5 ಕೋಟಿ ವೆಚ್ಚದಲ್ಲಿ ಕಿರು ಶುದ್ಧೀಕರಣ ಘಟಕವನ್ನು ನಿರ್ಮಿಸಿ ತ್ಯಾಜ ನದಿಗೆ ಸೇರದಂತೆ ತಡೆದು ನೀರನ್ನು ಎಸ್.ಟಿ.ಪಿ.ಗೆ ಬಿಡುವ ಯೋಜನೆಯ ಬಗ್ಗೆ ಕ್ರಿಯಾಯೋಜನೆ ಸಿದ್ಧವಾಗಿ ಸಭೆಯನ್ನು ನಡೆಸಿದ್ದು ಟೆಂಡರ್ ಹಂತದಲ್ಲಿದೆ. ಕೆಲ ಇಲಾಖೆಯ ನಿರಪೇಕ್ಷಣಾ ಪತ್ರ ಲಭಿಸಬೇಕಿದೆ ಎಂದು ಅವರು ತಿಳಿಸಿದರು.
‘ಖಾರ್ವಿ ಸಮಾಜವು ಕುಂದಾಪುರದ ಪಂಚಗಂಗಾವಳಿ ನದಿಯನ್ನು ನಂಬಿ ಬದುಕು ಸಾಗಿಸುತ್ತಿದೆ. ಹಲವು ವರ್ಷದಿಂದ ಒಳಚರಂಡಿ ಸಮಸ್ಯೆಯಿದ್ದು ಯುಜಿಡಿ ಕಾಮಗಾರಿ ಶೀಘ್ರ ಮಾಡಿದಲ್ಲಿ ಮಾತ್ರವೇ ಇದಕ್ಕೆ ಪರಿಹಾರ. ನದಿಗೆ ಕಲುಷಿತ ನೀರು ಬಿಡುತ್ತಿದ್ದು ಮೀನುಗಾರರು ನದಿಗೆ ಇಳಿಯ ದಂತಾಗಿದೆ. ನೀರಿನಿಂದ ಸಮಸ್ಯೆಯಾದಲ್ಲಿ ಸರಕಾರದ ಯೋಜನೆಯಾದ ಪಂಜರ ಕೃಷಿ ಮಾಡಿಕೊಂಡಿರುವ ಮೀನುಗಾರರಿಗೆ ನಷ್ಟವಾಗುತ್ತದೆ. ತಕ್ಷಣ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಸ್ಥಳೀಯರೆ ಇದನ್ನು ಮುಚ್ಚುತ್ತೇವೆ’
-ಪ್ರಕಾಶ್ ಖಾರ್ವಿ, ಪುರಸಭೆ ಮಾಜಿ ಸದಸ್ಯರು