Malpe | ಮತ್ಸ್ಯ ಸಂಪತ್ತು ವೃದ್ದಿಗಾಗಿ ಮೀನುಗಾರರಿಂದ ಸಮುದ್ರಪೂಜೆ
ಮಲ್ಪೆ, ಆ.28: ಈ ಸಾಲಿನ ಋತುವಿನಲ್ಲಿ ಮೀನುಗಾರಿಕೆ ನಡೆಸುವಾಗ ಯಾವುದೇ ತೊಂದರೆಗಳು ಉಂಟಾಗದಂತೆ ಮತ್ತು ಹೇರಳ ಮತ್ಸ್ಯ ಸಂಪತ್ತು ಲಭಿಸುವಂತೆ ಪ್ರತಿವರ್ಷದಂತೆ ಮೀನುಗಾರರು ಮಲ್ಪೆ ಕಡಲತೀರದಲ್ಲಿ ಶುಕ್ರವಾರ ಸಾಂಪ್ರದಾಯಿಕವಾಗಿ ವಿಶೇಷ ಸಮುದ್ರ ಪೂಜೆ ನಡೆಸಿದರು.
ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ವಿವಿಧ ಮೀನುಗಾರ ಸಂಘಟನೆಗಳು, ಸಮಸ್ತ ಮೀನುಗಾರರ ಉಪಸ್ಥಿತಿಯಲ್ಲಿ ಸಮುದ್ರಪೂಜೆ ನಡೆಸಲಾಯಿತು. ಬೆಳಗ್ಗೆ ವಡಭಾಂಡ ಬಲರಾಮ ದೇವಸ್ಥಾನದಲ್ಲಿ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿ, ಅನುವಂಶಿಕ ಅರ್ಚಕ ಶ್ರೀನಿವಾಸ ಭಟ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬೊಬ್ಬರ್ಯ ದೈವಕ್ಕೆ ಪೂಜೆ ಸಲ್ಲಿಸಿ ಶೋಭಾಯಾತ್ರೆ ಸಮುದ್ರತೀರಕ್ಕೆ ತೆರಳಿ, ಧಾರ್ಮಿಕ ಪ್ರಕ್ರಿಯೆ ನಡೆಸಿ, ಬಳಿಕ ಸಮುದ್ರರಾಜನಿಗೆ ಫಲಪುಷ್ಪ ಕ್ಷೀರವನ್ನು ಸಮರ್ಪಿಸಿ ಮೀನುಗಾರರ ರಕ್ಷಣೆ ಮತ್ತು ಸುರಕ್ಷೆಯನ್ನು ಕೋರಿದರು.
ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ.ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮೀನುಗಾರ ಸಂಘದ ಅಧ್ಯಕ್ಷ ನಾರಾಯಣ ಜೆ.ಕರ್ಕೇರ, ಕಾರ್ಯದರ್ಶಿ ಜಗನ್ನಾಥ ಕಡೆಕಾರ್, ಕೋಶಾಧಿಕಾರಿ ಶಿವಾನಂದ, ಮೀನುಗಾರ ಸಂಘದ ನಿಕಟಪೂರ್ವ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಮಾಜಿ ಅಧ್ಯಕ್ಷರುಗಳಾದ ಶಿವಪ್ಪ ಕಾಂಚನ್, ಕೇಶವ ಕೋಟ್ಯಾನ್, ಹಿರಿಯಣ್ಣ ಟಿ.ಕಿದಿಯೂರು, ಸತೀಶ್ ಕುಂದರ್, ಕೃಷ್ಣ ಎಸ್.ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಸಮುದ್ರ ಪೂಜೆಯ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ಎಲ್ಲ ಮೀನುಗಾರಿಕಾ ಚಟುವಟಿಕೆಗಳಿಗೆ ರಜೆ ಸಾರಲಾಗಿತ್ತು.