ಹುಲಿಕಲ್ ಘಾಟ್ ಪ್ರದೇಶಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ; ರೀಟೇನಿಂಗ್ ವಾಲ್, ಇತರ ಕಾಮಗಾರಿ ಪರಿಶೀಲನೆ
ಕುಂದಾಪುರ, ಜು.14: ಕರಾವಳಿ ಹಾಗೂ ಮಲೆನಾಡು ಸಂಪರ್ಕದ ಹುಲಿಕಲ್ ಘಾಟ್ ಪ್ರದೇಶದಲ್ಲಿ ಆಗ್ಗಾಗೆ ಕಂಡು ಬರುವ ಸಮಸ್ಯೆ ಇಲಾಖೆಗೆ ಬಹಳಷ್ಟು ಸವಾಲಾಗಿತ್ತು. ಸೂಕ್ತ ಕ್ರಮವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಗತ್ಯ ವಾಹನಗಳ ಸಂಚಾರಕ್ಕೆ ಬೇಕಾದ ಕಾಮಗಾರಿ ಕೈಗೊಳ್ಳಲಾಗಿದೆ. ಮಳೆಯಿಂದಾಗಿ ಹೆಚ್ಚಿನ ಕಾಮಗಾರಿ ಒಂದಷ್ಟು ವಿಳಂಬವಾದರೂ ಕೂಡ ಹುಲಿಕಲ್ ಘಾಟಿ ಸಮಸ್ಯೆ ಪರಿಹಾರಕ್ಕೆ ಇಲಾಖೆ ಕಠಿಬದ್ಧವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ ಹುಲಿಕಲ್ ಘಾಟ್‌ನಲ್ಲಿ ನಿರ್ಮಾಣ ವಾಗುತ್ತಿರುವ ರೀಟೇನಿಂಗ್ ವಾಲ್ ಹಾಗೂ ಇತರೆ ರಸ್ತೆ ಕಾಮಗಾರಿಯನ್ನು ಮಂಗಳವಾರ ಸಂಜೆ ವೇಳೆ ಪರಿವೀಕ್ಷಣೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಬೈಂದೂರು-ರಾಣಿಬೆನ್ನೂರು ಸಂಪರ್ಕಿಸುವ ರಾಷ್ಟ್ರೀಯಹೆದ್ದಾರಿ ಕಾಮಗಾರಿ ಸಹಿತ ಆಗುಂಬೆ ಹೆದ್ದಾರಿ ವಿಚಾರದಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಪರಿಹಾರಕ್ಕೆ ಕ್ರಮವಹಿಸಲಾಗುತ್ತದೆ ಎಂದ ಅವರು ಇಲಾಖೆಯ ಗುತ್ತಿಗೆಯಡಿ ಕೆಲಸ ಮಾಡುವ ಜಿಲ್ಲೆಯ ಮಂದಿಯ ಸಂಬಳದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕಾಂಟ್ರಾಕ್ಟರ್ ಬಿಲ್ ಮಾಡಿಕೊಡುವಲ್ಲಿ ವ್ಯತ್ಯಯವಾಗಿದೆ. ಈ ವರ್ಷದಿಂದ ನೇರವಾಗಿ ಗುತ್ತಿಗೆ ಆದಾರದಲ್ಲಿ ಕೆಲಸಕ್ಕೆ ತೆಗೆದುಕೊಂಡು ವೇತನ ನೀಡಲಾಗುತ್ತದೆ ಎಂದರು.
ಕುಂದಾಪುರ ಐಬಿ ಕಾಮಗಾರಿ ಪ್ರಗತಿಯಲ್ಲಿ
ಕುಂದಾಪುರ ಲೋಕೋಪಯೋಗಿ ಇಲಾಖೆ ನಿರೀಕ್ಷಣಾ ಮಂದಿರ (ಪಿಡಬ್ಲ್ಯೂಡಿ ಐಬಿ) ಕಾಮಗಾರಿ ವಿಚಾರದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕುಂದಾಪುರ ಐಬಿ ಕಾಮಗಾರಿಗೆ ನಾನು ಸಚಿವನಾಗಿದ್ದಾಗ ಅನುದಾನ ನೀಡಿದ್ದು ಕೆಳ ಹಂತದ ಕಾಮಗಾರಿ ಈಗಾಗಲೇ ಮುಗಿದಿದೆ. ಮೇಲಂಸ್ತಿನ ಕಾಮಗಾರಿಗೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.