×
Ad

ಅಳಿವೆಕೋಡಿ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

Update: 2026-07-13 22:19 IST

ಬೈಂದೂರು: ತಾಲೂಕಿನ ಅಳಿವೆಕೋಡಿ ಗ್ರಾಮದಲ್ಲಿ ಮೀನುಗಾರಿಕಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಶೀಘ್ರ ದುರಸ್ಥಿ ಮಾಡಬೇಕೆಂದು ಸಾರ್ವಜನಿಕರು ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಸೋಮವಾರ ಧರಣಿ ನಡೆಸಿದರು.

ಧರಣಿಯ ನೇತೃತ್ವ ವಹಿಸಿದ್ದ ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ ಉಪ್ಪುಂದ ಮಾತನಾಡಿ, ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆಯ ಹಲವೆಡೆ ದೊಡ್ಡ ಗುಂಡಿಗಳು ಉಂಟಾಗಿವೆ. ಇದರಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ಶಾಲಾ ಮಕ್ಕಳಿಗೆ ಪ್ರತಿದಿನ ತೀವ್ರ ತೊಂದರೆಯಾಗುತ್ತಿದೆ ಎಂದರು.

ಈ ರಸ್ತೆಯಲ್ಲಿ ಪ್ರತಿದಿನ ಶಾಲಾ ವಾಹನಗಳು ಸಂಚರಿಸುತ್ತಿದ್ದು. ಸುಮಾರು 150 ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾರೆ. ರಸ್ತೆ ಹದಗೆಟ್ಟಿರುವುದರಿಂದ ಅಪಘಾತ ಸಂಭವಿಸುವ ಅಪಾಯ ಹೆಚ್ಚಾ ಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದೆ.ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಹದಗೆಟ್ಟು ಸಂಚಾರ ದುಸ್ತರವಾಗಿದ್ದು ಶೀಘ್ರ ದುರಸ್ಥಿ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ರವಿರಾಜ್ ದೀಕ್ಷಿತ್ ರವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವೀರಭದ್ರ ಖಾರ್ವಿ, ಟಿ.ಗೋಪಾಲ ಖಾರ್ವಿ, ರಾಘವೇಂದ್ರ ಖಾರ್ವಿ, ಗಣೇಶ ಎಮ್.ಕೆ, ರವೀಂದ್ರ ಖಾರ್ವಿ, ಸೋಮಶೇಖರ್, ಮೀನುಗಾರ ಮುಖಂಡರು, ಅಳಿವೆಕೋಡಿ ಹಾಗೂ ತಾರಾಪತಿ ಗ್ರಾಮಸ್ಥರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News