ಸ್ಕೀಮ್ ನೌಕರರಿಂದ ಉಡುಪಿ ಡಿಸಿ ಕಚೇರಿ ಎದುರು ಕರಾಳ ದಿನಾಚರಣೆ
ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲೆಯ ಸ್ಕೀಮ್ ನೌಕರರು ರಾಜ್ಯಾದ್ಯಂತ ನಡೆಸಿದ ಕರಾಳ ದಿನಾಚ ರಣೆಯ ಅಂಗವಾಗಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಮುಷ್ಕರವನ್ನು ನಡೆಸಿದರು.
ಸರಕಾರಿ ಶಾಲೆಗಳಲ್ಲಿ ಮಕ್ಕಳ ಗೈರು ಹಾಜರಾತಿಯನ್ನು ತಡೆಯಲು ಮತ್ತು ಮಕ್ಕಳ ಗ್ರಹಿಕೆ ಶಕ್ತಿಯನ್ನು ಹೆಚ್ಚಿಸಲು ಪ್ರಾರಂಭಿಸಲಾದ ಅಕ್ಷರ ದಾಸೋಹ ಯೋಜನೆ ಈಗ 25 ವರ್ಷಗಳನ್ನು ಪೂರ್ಣಗೊಳಿಸಿದ್ದು, ಈಗ ಯೋಜನೆಯನ್ನು ಖಾಸಗಿಯವರಿಗೆ ನೀಡುವ ಮೂಲಕ ಯೋಜನೆಯನ್ನು ಬಲಹೀನಗೊಳಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ಮೂಲಕ ನಡೆಸಿದ ಧರಣಿ ಪ್ರತಿಭಟನೆ ವೇಳೆ ರಾಜ್ಯ ಸಂಘದ ಗೌರವಾಧ್ಯಕ್ಷೆ ಹಾಗೂ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮೀ ಆರೋಪಿಸಿದರು.
ಚುನಾವಣೆ ವೇಳೆ ರಾಜ್ಯ ಸರಕಾರ ನೀಡಿದ ಭರವಸೆಯಂತೆ ಬಿಸಿಯೂಟ ಕಾರ್ಮಿಕರ ವೇತನದಲ್ಲಿ 7,000ರೂ.ಗಳ ಹೆಚ್ಚಳ ಆಗಬೇಕು. ಅವರಿಗೆ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಜಿಲ್ಲೆಗಳಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಇಡಿಗಂಟು ತಕ್ಷಣ ಜಾರಿಗೊಳಿಸಬೇಕು ಎಂದವರು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತರನ್ನು ಬಿಎಲ್‌ಒ, ಎಸ್‌ಐಆರ್ ಹಾಗೂ ಇತರ ಸಮೀಕ್ಷಾ ಕೆಲಸಗಳಿಂದ ಮುಕ್ತಗೊಳಿಸ ಬೇಕು. ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಅಂಗನವಾಡಿ-ಕಮ್- ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕು. ಬಿಸಿಯೂಟ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸ ಬೇಕು. ಇಸ್ಕಾನ್, ಕೆಪಿಎಸ್ ಶಾಲೆ, ಮಠ ಹಾಗೂ ಇನ್ನಿತರ ಸಂಘಸಂಸ್ಥೆಗಳಿಂದ ಬಿಸಿಯೂಟ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಧರಣಿ ನಿರತರು ಹೇಳಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಉಡುಪಿ ಜಿಲ್ಲಾ ಸಮಿತಿ ಮತ್ತು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷಪಾದ ಎಸ್.ವರಲಕ್ಷೀ ಮತನಾಡಿ ದರು. ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಭಾರತಿ, ಕಾರ್ಯದರ್ಶಿ ಸುಶೀಲ ನಾಡ, ಕೋಶಾಧಿಕಾರಿ ಯಶೋಧ, ಸುಕಲ, ಪ್ರೇಮ.ಕೆ, ಜಯಲಕ್ಷ್ಮಿ, ಜಯಂತಿ, ಸಾವಿತ್ರಿ, ಚಿತ್ರಕಲಾ, ಅಕ್ಷರದಾಸೋಹ ಸಂಘದ ಜಿಲ್ಲಾ ಕಾರ್ಯದರ್ಶಿ ಸುನಂದ, ಮುಖಂಡರಾದ ರತ್ನ, ಜಯಶ್ರೀ, ಸುಲೋಚನ, ಶಶಿಕಲಾ, ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಕಾರ್ಯದರ್ಶಿ ಚಂದ್ರಶೇಖರ್ ವಿ., ಕೋಶಾಧಿಕಾರಿ ಕವಿರಾಜ್ ಎಸ್.ಕಾಂಚನ್, ಉಪಾಧ್ಯಕ್ಷ ರಾದ ಸುರೇಶ್ ಕಲ್ಲಗಾರ, ಎಚ್.ನರಸಿಂಹ, ಮುಖಂಡರಾದ ಉಮೇಶ್ ಕುಂದರ್, ನಾಗೇಶ್, ಸುನೀತಾ ಶೆಟ್ಟಿ, ಬಲ್ಕೀಸ್, ನಳಿನಿ ಎಸ್, ಜನವಾದಿ ಮಹಿಳಾ ಸಂಘದ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷರಾದ ಸಂಜೀವ ಬಳ್ಕೂರು ಉಪಸ್ಥಿತರಿದ್ದರು.