×
Ad

ಮೋದಿ ಉಡುಪಿ ಭೇಟಿ: ಆದಿ ಉಡುಪಿ ಹೆಲಿಪ್ಯಾಡಿನಲ್ಲಿ ಪರಿಶೀಲನೆ

Update: 2025-11-10 19:48 IST

ಉಡುಪಿ, ನ.10: ಈ ತಿಂಗಳ 28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆದಿಉಡುಪಿ ಹೆಲಿಪ್ಯಾಡ್ ಪ್ರದೇಶಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆದಿಉಡುಪಿಯಲ್ಲಿ ಪ್ರಸ್ತುತ ಇರುವ 3 ಹೆಲಿಪ್ಯಾಡ್ ಗಳನ್ನು ನವೀಕರಿಸುವ ಜೊತೆಗೆ ಹೆಚ್ಚುವರಿಯಾಗಿ ಒಂದು ನೂತನ ಹೆಲಿಪ್ಯಾಡ್ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿದ್ದು, ತಕ್ಷಣ ಲೋಕೋಪಯೋಗಿ ಇಲಾಖೆಯ ಮೂಲಕ ನಿರ್ಮಾಣ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಈಗಾಗಲೇ ಉಡುಪಿ ನಗರಸಭೆ ವತಿಯಿಂದ ಹೆಲಿಪ್ಯಾಡ್ ಪ್ರದೇಶದಲ್ಲಿ ಹುಲ್ಲುಗಳನ್ನು ತೆರವುಗೊಳಿಸಿ, ಸ್ವಚ್ಚತೆ ಕಾರ್ಯಗಳು ನಡೆಯುತ್ತಿದೆ. ಹೆಲಿಪ್ಯಾಡ್ ಸಂಪರ್ಕಿಸುವ ರಸ್ತೆಗಳ ದುರಸ್ತಿಗೆ ಕ್ರಮ ವಹಿಸಲಾಗಿದ್ದು, ಹೆಲಿಪ್ಯಾಡ್ ಪ್ರದೇಶಕ್ಕೆ ಶೀಘ್ರದಲ್ಲಿ ಸುಸಜ್ಜಿತ ಗೇಟ್ ಅಳವಡಿಕೆ ಹಾಗೂ ಆವರಣ ಗೋಡೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ಆದಿಉಡುಪಿ ಕರಾವಳಿ ಜಂಕ್ಷನ್ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ವಿಶೇಷ ಆದ್ಯತೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್ ಅವರಿಗೆ ಹೇಳಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್, ಸುಂದರ ಕಲ್ಮಾಡಿ, ಶ್ರೀಶ ಭಟ್, ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುರ್ಮಾ ಬೈಲೂರು, ಪ್ರಮುಖರಾದ ಹರೀಶ್ ರಾಮ್, ದಿನೇಶ್ ಅಮೀನ್, ಅಕ್ಷಿತ್ ಶೆಟ್ಟಿ ಹೆರ್ಗ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಲಾಯ್ಡ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯಕ ಇಂಜಿನಿಯರ್ ಮಂಜುನಾಥ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News