ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಸೇವೆ, ನಂಬಿಕೆ ಕಾರಣ: ರೇಣುಕಾ
ಉಡುಪಿ, ಮಾ.1: ಸಹಕಾರಿ ಸಂಸ್ಥೆಗಳು ಇಂದು ವಾಣಿಜ್ಯ ಬ್ಯಾಂಕುಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬೆಳೆಯುತ್ತಿವೆ. ಇದಕ್ಕೆ ಸಹಕಾರಿ ಸಂಸ್ಥೆಗಳಲ್ಲಿನ ಸೇವೆ ಮತ್ತು ಅದರ ಮೇಲೆ ಜನ ಇಟ್ಟಿರುವ ನಂಬಿಕೆ ಕಾರಣ ಎಂದು ಉಡುಪಿ ಜಿಲ್ಲಾ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕಿ ರೇಣುಕಾ ಜಿ. ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಂಡಳ ಬೆಂಗಳೂರು, ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಮೂಡಬಿದಿರೆ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಉಡುಪಿ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ವಿವಿಧೋದ್ದೇಶ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಶನಿವಾರ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಆಯೋಜಿಸಿದ್ದ ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಈ ರೀತಿಯ ತರಬೇತಿಗಳು ಕಾಲಕಾಲಕ್ಕೆ ನಡೆಯುತ್ತಿರಬೇಕು. ಇದರಿಂದ ಕಾಯ್ದೆ, ನಿಯಮಗಳನ್ನು ಅರಿತುಕೊಳ್ಳಬಹುದು. ಸಹಕಾರಿ ಸಂಸ್ಥೆಗಳು ಜಿಲ್ಲಾ ಲೆಕ್ಕಪರಿಶೋಧನಾ ಇಲಾಖೆಯಲ್ಲಿಯೇ ಆಡಿಟ್ ಮಾಡಿಸಿಕೊಳ್ಳಬೇಕು. ಇದರಿಂದ ಮುಂದೆ ಎದುರಾಗುವ ಸಮಸ್ಯೆಗಳಿಂದ ಪಾರಾಗಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಜನೌಷಧಿ ಕೇಂದ್ರ, ಶಾಲೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆಗಳನ್ನು ಕೂಡ ಆರಂಭಿಸಬಹುದಾಗಿದೆ. ವಾಣಿಜ್ಯ ಬ್ಯಾಂಕಿನ ಉನ್ನತ ಜವಾಬ್ದಾರಿ ವಹಿಸಿಕೊಂಡ ಅಧಿಕಾರಿಗಳು ಹೊರರಾಜ್ಯ ದವರಾಗಿರುವುದರಿಂದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮುಕ್ತವಾಗಿ ಮಾತುಕತೆ ಮಾಡಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಹೆಚ್ಚಿನವರು ಸಹಕಾರಿ ಸಂಸ್ಥೆಯತ್ತ ಮುಖ ಮಾಡುತ್ತಿದ್ದಾರೆ ಎಂದರು.
ಮೂಡಬಿದಿರೆ ಕೆಐಸಿಎಂ ಪ್ರಾಂಶುಪಾಲ ಡಾ.ವಿಶ್ವೇಶ್ವರಯ್ಯ ಎಂ. ಸ್ವಾಗತಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಸಿಇಓ ಅನುಷಾ ಕೋಟ್ಯಾನ್ ವಂದಿಸಿದರು.
ಹರೀಶ್ ಕಾರ್ಯಕ್ರಮ ನಿರೂಪಿಸಿದರು.