ಉಡುಪಿ: ಟೂರ್ ಅರೇಬಿಯಾ ಮೂಲಕ ಕಳೆದ ವರ್ಷ ಇಡೀ ಕುಟುಂಬದ ಸಮೇತ ಹಜ್ ನೆರವೇರಿಸಿರುವುದು ಸ್ಮರಣೀಯ ಅನುಭವ. ಸಂಸ್ಥೆ ಪ್ರತಿಯೊಂದು ವಿಷಯದಲ್ಲೂ ಅತ್ಯುತ್ತಮ ಸೇವೆ ಒದಗಿಸಿ ಇಡೀ ಹಜ್ ಪ್ರಯಾಣವನ್ನು ಬಹಳ ವಿಶೇಷವಾಗಿಸಿತ್ತು. ನನ್ನ ವೃದ್ಧ ತಂದೆ ತಾಯಿಗಳ ಹಜ್ ನಿರ್ವಹಣೆ ಬಗ್ಗೆ ನನಗೆ ತುಂಬಾ ಆತಂಕವಿತ್ತು. ಆದರೆ ಟೂರ್ ಅರೇಬಿಯಾ ಬಳಗದ ಸಹಕಾರ ಮನೋಭಾವ, ಅತ್ಯುತ್ತಮ ಸೌಲಭ್ಯಗಳು, ಉತ್ಕೃಷ್ಟ ಗುಣಮಟ್ಟದ ವಾಸ್ತವ್ಯ ಮತ್ತು ವ್ಯವಸ್ಥಿತ ನಿರ್ವಹಣೆಗಳಿಂದಾಗಿ ಎಲ್ಲವೂ ನಮ್ಮ ನಿರೀಕ್ಷೆಗೂ ಮೀರಿ ಅತ್ಯುತ್ತಮವಾಗಿ ನೆರವೇರಿತು. ಟೂರ್ ಅರೇಬಿಯಾದ ಒಟ್ಟು ತಂಡ ಹಾಜಿಗಳಿಗೆ ಯಾವುದೇ ವಿಷಯದಲ್ಲಿ ಸಮಸ್ಯೆಯಾಗದಂತೆ ಅತ್ಯುತ್ತಮವಾಗಿ ನೋಡಿಕೊಂಡಿತು ಎಂದು ಮುಕ್ಕ ಪ್ರೋಟೀನ್ಸ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಹಾಗು ಸಿಇಒ ಕೆ. ಮೊಹಮ್ಮದ್ ಹಾರಿಸ್ ಅವರು ಅಭಿಪ್ರಾಯಪಟ್ಟರು.
ನಗರದ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ಗುರುವಾರ ನಡೆದ ಆಕ್ಟೊಪಸ್ ಹಾಲಿಡೇಸ್ ಗ್ರೂಪ್ ನ ಟೂರ್ ಅರೇಬಿಯಾ ಹಜ್ ಹಾಗೂ ಉಮ್ರಾ ಸಂಸ್ಥೆಯ 2027 ರ ಹಜ್ ಬ್ರೋಷರ್ ಬಿಡುಗಡೆ ಮತ್ತು 2026 ರ ಹಾಜಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹಿರಿಯ ಉದ್ಯಮಿ, ಮುಕ್ಕ ಪ್ರೋಟೀನ್ಸ್ ಲಿ. ನ ಮುಖ್ಯಸ್ಥರಾದ ಕೆ. ಅಬ್ದುಲ್ ರಝಾಕ್ ಹಾಜಿ ಅವರು 2027ರ ಬ್ರೋಷರ್ ಬಿಡುಗಡೆ ಮಾಡಿದರು.
2026 ರಲ್ಲಿ ಟೂರ್ ಅರೇಬಿಯಾದೊಂದಿಗೆ ಹಜ್ ನಿರ್ವಹಿಸಿದ ಮಂಗಳೂರಿನ ಯುನಿಟಿ ಆಸ್ಪತ್ರೆಯ ನಿರ್ದೇಶಕ ಮೊಯ್ದಿನ್ ಅಶ್ಫಾಕ್, ಗೋವಾದ ಇಂಡೋ ಟೆಕ್ ಮೆರೈನ್ ಫ್ರೋಜನ್ ಸೀಫುಡ್ ಎಕ್ಸ್‌ಪೋರ್ಟ್ಸ್ ನ ವ್ಯವಸ್ಥಾಪಕ ಪಾಲುದಾರ ಮುಷ್ತಾಕ್ ಅಹ್ಮದ್, ಜಾಮಿಯಾ ಝಿಯಾವುಲ್ ಉಲೂಮ್ ಕಂಡ್ಲೂರ್ ನ ಉಪನ್ಯಾಸಕ ಮೌಲಾನ ಝಮೀರ್ ಅಹ್ಮದ್ ರಶಾದಿ ಹಾಗೂ ಅಮೆಲ್ ಅಶ್ಫಾಕ್, ಸಂದರ್ಭೋಚಿತವಾಗಿ ಮಾತನಾಡಿ ಟೂರ್ ಅರೇಬಿಯಾದ ಯಶಸ್ವೀ ನಿರ್ವಹಣೆ, ಸೌಲಭ್ಯಗಳು ಮತ್ತು ಸೇವೆಗಳನ್ನು ಮುಕ್ತವಾಗಿ ಶ್ಲಾಘಿಸಿದರು.
ಉಡುಪಿ ಜಾಮಿಯಾ ಮಸೀದಿಯ ಇಮಾಮ್, ಮೌಲಾನ ರಶೀದ್ ನದ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟೂರ್ ಅರೇಬಿಯಾದ ಮುಖ್ಯಸ್ಥ ಯಾಸೀನ್ ಮಲ್ಪೆ, 2026 ರ ಹಾಜಿಗಳಿಗೆ ಅವರು ಪ್ರವಾಸದುದ್ದಕ್ಕೂ ನೀಡಿದ ಸಹಕಾರಕ್ಕಾಗಿ ಕೃತಜ್ಞತೆ ಸಲ್ಲಿಸಿ, 2027 ರ ಹಜ್ ಗೆ ಟೂರ್ ಅರೇಬಿಯಾದ ವಿವಿಧ ಪ್ಯಾಕೇಜ್ ಗಳು, ಅಲ್ಲಿ ಸಿಗುವ ಸೌಲಭ್ಯ ಮತ್ತಿತರ ವಿವರಗಳನ್ನು ನೀಡಿದರು.
2026 ರ ಹಜ್ ತಂಡದಲ್ಲಿದ್ದ ಕೆ. ಮೊಹಮ್ಮದ್ ಆರಿಫ್ , ಬದ್ರುದ್ದೀನ್ ನಾವುಂದ, ನಝೀರ್ ಸಾಹೇಬ್ ಗುಡ್ಮಿ, ಮುನವರ್ ಅಹ್ಮದ್ ಮಂಗಳೂರು, ಇಸ್ಮಾಯಿಲ್ ಮೂಡುಬಿದಿರೆ ಬ್ರೋಷರ್ ಬಿಡುಗಡೆ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
2027 ಹಜ್ ಗಾಗಿ ಇಬ್ಬರು ಅತಿಥಿಗಳು ತಮ್ಮ ಕುಟುಂಬದ ಐವರು ಸದಸ್ಯರಿಗೆ ಸೀಟುಗಳನ್ನು ಕಾದಿರಿಸುವ ಮೂಲಕ 2027 ರ ಬುಕಿಂಗನ್ನು ಉದ್ಘಾಟಿಸಲಾಯಿತು. ಪ್ರಥಮವಾಗಿ ಬುಕಿಂಗ್ ಮಾಡಿದವರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಲಾಯಿತು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಮೌಲಾ ಮತ್ತು ಉದ್ಯಮಿ ಅಶ್ರಫ್ ಬೆಂಗ್ರೆ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.