Udupi | ಮಲ್ಪೆಯಲ್ಲಿ ಪತ್ತೆಯಾದ 10ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಗಡಿಪಾರು
ಉಡುಪಿ : ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ಸರಹದ್ದಿನ ವಡಬಾಂಡೇಶ್ವರ ಬಸ್ ನಿಲ್ದಾಣದ ಬಳಿ 2024ರ ಅಕ್ಟೋಬರ್ ತಿಂಗಳ 11ರಂದು ಆನುಮಾನಾಸ್ಪದವಾಗಿ ಕಂಡುಬಂದ 10ಮಂದಿ ಅಕ್ರಮ ಬಾಂಗ್ಲಾ ದೇಶದ ವಲಸಿಗರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದು, ಇದೀಗ ಅವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪತ್ರಿಕಾ ಪ್ರಕಟಣೆ ತಿಳಿಸಿದೆ
ಮಲ್ಪೆ ಪರಿಸರದಲ್ಲಿ ಅನಧಿಕೃತ ವಾಸವಾಗಿದ್ದ 10 ಅಕ್ರಮ ಬಾಂಗ್ಲಾ ದೇಶದ ಪ್ರಜೆಗಳ ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು.
ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ 08/12/2025 ರಂದು 10 ಅಕ್ರಮ ಬಾಂಗ್ಲಾ ವಲಸಿಗರಿಗೆ 2 ವರ್ಷ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿತ್ತು. ಸದ್ರಿ ಅಕ್ರಮ ಬಾಂಗ್ಲಾ ವಲಸಿಗರನ್ನು ಉಡುಪಿ ಜಿಲ್ಲಾ ಕಾರಾಗೃಹ ನಂತರ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷಾ ಬಂದಿಯಾಗಿಸಲಾಗಿತ್ತು.
ಇದೀಗ ಶಿಕ್ಷಾ ಅವಧಿಯು ಅ.10ರಂದು ಮುಕ್ತಾಯಗೊಂಡಿದ್ದು, ಸದ್ರಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಅವರ ದೇಶಕ್ಕೆ ಗಡಿಪಾರು ಪ್ರಕ್ರಿಯೆ ಕುರಿತು ಭಾರತದ ಗೃಹ ಸಚಿವಾಲಯ ಮತ್ತು ಪ್ರಾದೇಶಿಕ ವಿದೇಶಿಯರ ನೋಂದಣಾಧಿಕಾರಿ, ಶಾಂತಿನಗರ, ಬೆಂಗಳೂರು ಇವರು ಆದೇಶ ಹೊರಡಿಸಿದ್ದು, ಸದ್ರಿ ಆದೇಶದಂತೆ 10 ಅಕ್ರಮ ಬಾಂಗ್ಲಾ ವಲಸಿಗರನ್ನು ಬೆಂಗಳೂರಿನಿಂದ ರೈಲಿನಲ್ಲಿ ಕರೆದುಕೊಂಡು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಬಿಎಸ್ಎಫ್ನ ನೋಡೆಲ್ ಅಧಿಕಾರಿಗಳ ಮುಂದೆ ಭಾರತ ದೇಶದಿಂದ ಗಡಿಪಾರು ಪ್ರಕ್ರಿಯೆ ಬಗ್ಗೆ ಹಾಜರುಪಡಿಸಲು ಮಲ್ಪೆ ವೃತ್ತ ನಿರೀಕ್ಷಕರಾದ ರಾಮಚಂದ್ರ ನಾಯ್ಕ ಮತ್ತು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಬೆಂಗಾವಲಿನೊಂದಿಗೆ ನ.23ರಂದು ಉಡುಪಿಯಿಂದ ತೆರಳಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಗಡಿಪಾರು ಪ್ರಕ್ರಿಯೆಯು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹಾಗೂ ಜಿಲ್ಲಾ ವಿದೇಶೀಯರ ನೋದಣಾಧಿಕಾರಿ ಯವರ ಮಾರ್ಗದರ್ಶನಲ್ಲಿ ನಡೆದಿದೆ. ಈ ಪ್ರಕ್ರಿಯೆಯಲ್ಲಿ ಜಿಲ್ಲಾ ವಿಶೇಷ ಪೊಲೀಸ್ ವಿಭಾಗದ ಹರೀಶ್ ಆರ್., ಪ್ರದೀಪ್, ಅಮರ್ ಕುಮಾರ್ ಹಾಗೂ ಮೈತ್ರಿ ಜಿಲ್ಲಾ ವಿದೇಶೀಯರ ವಿಭಾಗ ಸಹಕರಿಸಿತ್ತು.