ಉಡುಪಿ, ಸೆ.9:ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ಬುಧವಾರ ನಡೆದ ಮೊದಲ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಖಾತೆ ಪೋಡಿ, ದರಕಾಸ್ತು ಜಮೀನು, ಜಮೀನುಗಳಿಗೆ ಕಾಲುದಾರಿ, ಮನೆ, ನಿವೇಶನ, ಚರಂಡಿ ವ್ಯವಸ್ಥೆ ಮಾಡಿಕೊಡುವುದು, ಕೆರೆಗಳ ಅಭಿವೃದ್ಧಿ, ಗೃಹಜ್ಯೋತಿ ಮುಂತಾದ ಸಮಸ್ಯೆಗಳ ಕುರಿತು ವಿವಿಧ ಇಲಾಖೆಗಳಿಗೆ ಒಟ್ಟಾರೆಯಾಗಿ 208 ಅರ್ಜಿಗಳು ಸಲ್ಲಿಕೆಯಾಗಿದ್ದು, ಬಹುತೇಕ ಅರ್ಜಿಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಅವರು ಶಾಂತವಾಗಿ ಜನರ ಸಮಸ್ಯೆಗಳನ್ನು ಆಲಿಸಿ, ಇಲಾಖೆಯ ಅಧಿಕಾರಿಗಳಿಗೆ ಕೈಗೊಳ್ಳಬೇಕಾದ ಕ್ರಮ, ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವ ಕುರಿತಂತೆ ಸೂಚನೆಗಳನ್ನು ನೀಡಿದರು.

ಇಲಾಖಾವಾರು ಅರ್ಜಿ ಸ್ವೀಕಾರವನ್ನು ಗಣನೆಗೆ ತೆಗೆದುಕೊಂಡಾಗ, ಕಂದಾಯ ಇಲಾಖೆ ಅರ್ಧಕ್ಕೂ ಅಧಿಕ ಅಂದರೆ 120ರಷ್ಟು ಅರ್ಜಿಗಳನ್ನು ಸ್ವೀಕರಿಸಿತ್ತು. ಉಳಿದಂತೆ ಉಡುಪಿ ನಗರಸಭೆ 12, ಜಿಲ್ಲಾ ಪಂಚಾಯತ್ 11, ಎಪಿಎಂಸಿ 9, ಧಾರ್ಮಿಕ ದತ್ತಿ ಇಲಾಖೆ 6, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 5, ಮೆಸ್ಕಾಂ, ವಕ್ಫ್ ಮಂಡಳಿ, ಸಾರಿಗೆ ಇಲಾಖೆ, ಪಶು ಸಂಗೋಪನಾ ಇಲಾಖೆ, ಸರ್ವೆ ಇಲಾಖೆಗಳು ತಲಾ ನಾಲ್ಕು ಅರ್ಜಿಗಳನ್ನು ಸ್ವೀಕರಿಸಿದ್ದವು.

ಉಳಿದಂತೆ ಶಿಕ್ಷಣ ಇಲಾಖೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ತಲಾ 3, ಕನ್ನಡ ಸಂಸ್ಕೃತಿ ಇಲಾಖೆ, ಡಿಯುಡಿಸಿ, ಪೊಲೀಸ್ ಇಲಾಖೆ, ಅಂಬೇಡ್ಕರ್ ನಿಗಮ, ಸಣ್ಣ ನೀರಾವರಿ, ಸಾಮಾಜ ಕಲ್ಯಾಣ ಇಲಾಖೆಗಳಿಗೆ ತಲಾ 2 ಹಾಗೂ ಕೃಷಿ, ಲೋಕೋಪಯೋಗಿ, ಅಲ್ಪಸಂಖ್ಯಾತ ಇಲಾಖೆ, ಡಿಆರ್‌ಸಿಎಸ್, ಐಟಿಡಿಪಿ, ಕಾರ್ಮಿಕ, ಗಣಿ ಇಲಾಖೆಗೆ ತಲಾ ಒಂದು ಅರ್ಜಿ ಸಲ್ಲಿಕೆಯಾಗಿದ್ದವು.

ಬೈಂದೂರು ತಾಲೂಕು ರೈತ ಸಂಘವು ದೀಪಕ್‌ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಸಚಿವರಿಗೆ ಅರ್ಜಿಯನ್ನು ಸಲ್ಲಿಸಿ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗದ ಹಳ್ಳಿಗಳನ್ನು ಕೈಬಿಡುವಂತೆ ಮನವಿ ಮಾಡಿದರು. ಈ ಕುರಿತು ರೈತ ಸಂಘ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಒಂದು ವರ್ಷದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತಿದ್ದರೂ, ಈವರೆಗೆ ನಮಗೆ ನ್ಯಾಯದೊರಕಿಲ್ಲ. ತಾವಾದರೂ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿದರು.

ಮತ್ತೊಂದು ಅರ್ಜಿಯಲ್ಲಿ ಅವರು ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ರೈತ ಸಂಘದ ವಿರೋಧವನ್ನು ಸೂಚಿಸಿ, ಈ ಕುರಿತು ಕೇಂದ್ರ ಸರಕಾರ ಹೊರಡಿಸಿರುವ ನೋಟೀಫಿಕೇಷನ್‌ಗೆ ಆಕ್ಷೇಪಗಳನ್ನು ದಾಖಲಿಸುವಂತೆ ಮನವಿ ಮಾಡಿದರು.

ರೈತರ ಸಂಘದ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ಕಸ್ತೂರಿರಂಗನ್ ವರದಿಗೆ ರಾಜ್ಯ ಸರಕಾರದ ನಿಲುವು ಸ್ಪಷ್ಟವಿದೆ. ಈ ಹಿಂದೆ ಹಲವು ಬಾರಿ ವರದಿಯನ್ನು ತಿರಸ್ಕರಿಸಿ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಈ ಬಾರಿ ವರದಿ ಕುರಿತು ಚರ್ಚಿಸಲು ಶೀಘ್ರವೇ ವಿಶೇಷ ಅಧಿವೇಶನವನ್ನು ಕರೆಯಲಾಗುತ್ತಿದೆ. ಅದರಲ್ಲಿ ಎಲ್ಲಾ ಪಕ್ಷಗಳೊಂದಿಗೆ ವಿಸ್ತೃತ ಚರ್ಚೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.

ಬ್ರೆಸ್ಟ್ ಕ್ಯಾನ್ಸರ್‌ನಿಂದ ನರಳುತ್ತಿರುವ ಬ್ರಹ್ಮಾವರ ಸಮೀಪದ ಕರ್ಜೆಯ ಮಹಿಳೆಯೊಬ್ಬರು, ಇದಕ್ಕೆ ಕಿಮೊ ಥೆರಪಿ ಚಿಕಿತ್ಸೆ ಪಡೆಯಲು ಆಯುಷ್ಮಾನ್ ಯೋಜನೆಯಲ್ಲಿ ಅವಕಾಶ ಇಲ್ಲದ ಬಗ್ಗೆ ಸಚಿವರ ಗಮನ ಸೆಳೆದರು.ಕ್ಯಾನ್ಸರ್‌ನ ಹೈಡೋಸ್ ಇಂಜೆಕ್ಷನ್‌ಗೆ 50,000ರೂ.ಗಳಿಗೂ ಅಧಿಕ ಬೆಲೆ ಇದ್ದು, ಇಂಥ 16 ಇಂಜೆಕ್ಷನ್‌ಗಳನ್ನು ಪಡೆಯಲು ವೈದ್ಯರು ಸೂಚಿಸಿದ್ದಾರೆ. ಹಣ ಕೊಟ್ಟು ದುಬಾರಿ ಚಿಕಿತ್ಸೆ ಪಡೆಯಲು ಅಸಾಧ್ಯವಾದ ಕಾರಣ, ಕ್ಯಾನ್ಸರ್ ಹಾಗೂ ಕಿಡ್ನಿ ಕಾಯಿಲೆಗೆ ಚಿಕಿತ್ಸೆಯನ್ನು ಆಯುಷ್ಮಾನ್ ಯೋಜನೆಯಲ್ಲಿ ಸೇರಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಸಚಿವರು ಡಿಎಚ್‌ಓಗೆ ಸೂಚಿಸಿದರು.

ನಾಲ್ಕೂರು ಗ್ರಾಮದ ಆರತಿ ಮಿಯಾರು ಅವರು ತಮ್ಮ ಗ್ರಾಪಂನಿಂದ ಬರುತ್ತಿರುವ ನೀರು ಕಲುಷಿತವಾಗಿದ್ದು, ಇದರಿಂದ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಗ್ರಾಪಂಗೆ ಮನವಿ ಮಾಡಿದರೂ ಯಾವುದೇ ಪರಿಹಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು. ಖುದ್ದಾಗಿ ಸಿಇಒ ಅವರೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು.

ಪ್ರದರ್ಶನ, ಮಾರಾಟ ಮಳಿಗೆ: ಇದೆ ಸಂದರ್ಭದಲ್ಲಿ ಸಭಾಂಗಣದ ಅವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳ ಮಾಹಿತಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳು ಹಾಗೂ ವಿವಿಧ ಅಭಿವೃದ್ಧಿ ನಿಗಮಗಳ ವತಿಯಿಂದ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ವತಿಯಿಂದ ಸಂಜೀವಿನಿ ಉತ್ಪನ್ನಗಳ ಮಾರಾಟ ಮಳಿಗೆ, ಕೃಷಿ, ತೋಟಗಾರಿಕೆ, ಆಯುಷ್ ಇಲಾಖೆ, ಪಶು ಇಲಾಖೆ, ಕಾರ್ಮಿಕ ಇಲಾಖೆ, ಮೀನುಗಾರಿಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಹಿತಿ ಕ್ರೋಢಿಕರಣ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳು ಮಳಿಗೆ ಗಳನ್ನು ತೆರೆದು ತಮ್ಮ ಇಲಾಖೆಗಳಿಂದ ದೊರೆಯುವ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದವು.

ಜೊತೆಗೆ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನೂ ನಡೆಸಲಾಯಿತು.



 


 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor