×
Ad

ಉಡುಪಿ | ನ.14ರಿಂದ 22ನೇ ಕೆಬಿಐ ರಾ.ಕರಾಟೆ ಚಾಂಪಿಯನ್ಶಿಪ್

Update: 2025-11-12 22:02 IST

ಉಡುಪಿ, ನ.12: ಉಡುಪಿ ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಕರ್ನಾಟಕ ಸಂಸ್ಥೆಯ ಆಶ್ರಯದಲ್ಲಿ 22ನೇ ಕೆಬಿಐ ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಇದೇ ನ.14ರಿಂದ 16ರವರೆಗೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ ಎಂದು ಯುಬಿಎಸ್ಕೆಕೆ ಯ ಅಧ್ಯಕ್ಷ ಹಾಗೂ ರಾಷ್ಟ್ರೀಯ ಮುಖ್ಯ ಶಿಕ್ಷಕ ವಾಮನ್ ಪಾಲನ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು, ತೆಲಂಗಾಣ, ಅಸ್ಸಾಂ, ಚಂಡೀಗಢ ಸೇರಿದಂತೆ ಸುಮಾರು 13 ರಾಜ್ಯಗಳೂ ಸೇರಿದಂತೆ ವಿವಿದೆಡೆಗಳಿಂದ ಸುಮಾರು 2,500 ಮಂದಿ ಕರಾಟೆ ಪಟುಗಳು ಮೂರುಗಳ ದಿನಗಳ ಈ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಒಟ್ಟು ಎಂಟು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಕೊನೆಯ ದಿನ ಬುಡಾಕಾನ್ ಗ್ರಾಂಡ್ ಚಾಂಪಿಯನ್ ಗಾಗಿ ಸ್ಪರ್ಧೆ ನಡೆಯಲಿದೆ. ಸ್ಪರ್ಧಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಇದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳಿವೆ ಎಂದು ವಾಮನ್ ಪಾಲನ್ ತಿಳಿಸಿದರು.

ಕರಾಟೆ ಸ್ಪರ್ಧೆಯನ್ನು ನ.14ರ ಅಪರಾಹ್ನ 12:00ಗಂಟೆಗೆ ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ. ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ.ನಿ.ಬೀ.ವಿಜಯ ಬಲ್ಲಾಳ್ ಆಶೀರ್ವಚನ ನೀಡಲಿದ್ದಾರೆ. ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ನ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸಮಾರೋಪ ಸಮಾರಂಭ ನ.16ರಂದು ಸಂಜೆ 5:00ಗಂಟೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾಂಗ್ರೆಸ್ ಮುಖಂಡರಾದ ಕೆ.ಕೃಷ್ಣಮೂರ್ತಿ ಆಚಾರ್ಯ, ರಮೇಶ್ ಕಾಂಚನ್, ಪ್ರಸಾದ್ರಾಜ್ ಕಾಂಚನ್, ಎಚ್.ವಿಠಲ ಶೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಘುರಾಜ್ ಪಣಿಯಾಡಿ, ಕೋಶಾಧಿಕಾರಿ ಅಶೋಕ್ ಕುಲಾಲ್, ರಕ್ಷಿತ್ ಕೋಟಾಯನ್, ಶ್ರೇಯಸ್ ಉಪ್ಪೂರು, ಹಮೀದ್ ಬ್ರಹ್ಮಾವರ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News