×
Ad

ಉಡುಪಿ| 207 ಜಂಕ್ಷನ್‌ಗಳಲ್ಲಿ 601 ಸಿಸಿ ಕ್ಯಾಮರಾ ಅಳವಡಿಕೆ: ಎಸ್ಪಿ ಹರಿರಾಮ್

ಅಪರಾಧ ಚಟುವಟಿಕೆ ತಡೆಗೆ ಉಡುಪಿ ಪೊಲೀಸ್ ಇಲಾಖೆಯಿಂದ ಕ್ರಮ

Update: 2025-08-11 19:35 IST

ಉಡುಪಿ, ಆ.11: ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಉಡುಪಿ ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಸಹಭಾಗಿತ್ವದಲ್ಲಿ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಒಟ್ಟು 207 ಜಂಕ್ಷನ್‌ಗಳಲ್ಲಿ 601 ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮಹತ್ವಾಕಾಂಕ್ಷೆಯ ಯೋಜನೆ ಯನ್ನು ಹಮ್ಮಿಕೊಂಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಪ್ರಾರಂಭಿಕ ಹಂತದಲ್ಲಿ ಜಿಲ್ಲೆಯ ಗಡಿ ಪ್ರದೇಶಗಳು, ಮತೀಯ ಕಲಹದ ಸ್ಥಳಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಕ್ಯಾಮೆರಾ ಗಳನ್ನು ಅಳವಡಿಸಲಾಗುವುದು ಎಂದರು.

ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾಳ, ಹೊಸ್ಮಾರು, ಸಚ್ಚರಿಪೇಟೆ, ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಸಾಣೂರು, ಹೆಬ್ರಿ ಠಾಣಾ ವ್ಯಾಪ್ತಿಯ ಸೋಮೆಶ್ವರ, ಅಮಾಸೆಬೈಲು ಠಾಣಾ ವ್ಯಾಪ್ತಿಯ ಹೊಸಂಗಡಿ, ಕೊಲ್ಲೂರು ಠಾಣಾ ವ್ಯಾಪ್ತಿಯ ದಳಿ, ಗಂಗೊಳ್ಳಿ ಠಾಣಾ ವ್ಯಾಪ್ತಿಯ ಮೇಲ್ ಗಂಗೊಳ್ಳಿ, ಮಲ್ಪೆ ಠಾಣಾ ವ್ಯಾಪ್ತಿಯ ಮಲ್ಪೆ ಬೀಚ್ ಮತ್ತು ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಟಿ ಬಸ್ ನಿಲ್ದಾಣಗಳಲ್ಲಿ ಒಟ್ಟು 10 ಎ.ಎನ್.ಪಿ.ಆರ್.(ಅಟೋಮೆಟಿಕ್ ನಂಬರ್ ಪ್ಲೇಟ್ ರೀಡರ್) ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.

ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಸಂಕ ಜಂಕ್ಷನ್, ಕರಾವಳಿ ಜಂಕ್ಷನ್, ಇಂದ್ರಾಳಿ ಬ್ರಿಡ್ಜ್, ಸಂತೆಕಟ್ಟೆ ಜಂಕ್ಷನ್, ಸರ್ವಿಸ್ ಬಸ್ ನಿಲ್ದಾಣ ಮತ್ತು ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಕುಂದಾಪುರ ಉಪವಿಭಾಗ ವ್ಯಾಪ್ತಿಯ ಎಂ ಕೋಡಿ ಜಂಕ್ಷನ್ ಮತ್ತು ಕಂಡ್ಲೂರು ಪೇಟೆ ಹಾಗೂ ಕಾರ್ಕಳ ಉಪವಿಭಾಗ ವ್ಯಾಪ್ತಿಯ ಬಾರಾಡಿ ಮತ್ತು ನಾರಾವಿ ಸ್ಥಳಗಳಲ್ಲಿ ಒಟ್ಟು 10 ಉತ್ತಮ ಗುಣಮಟ್ಟದ ಕೆಮರಾಗಳನ್ನು ಅಳವಡಿಸಲಾಗುವುದು. ಈ ಕ್ಯಾಮೆರಾಗಳ ವೀಕ್ಷಣೆ ಯನ್ನು ಸ್ಥಳೀಯ ಸಂಬಂಧಪಟ್ಟ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ನಿರಂತರವಾಗಿ ನಡೆಸಲಾಗುವುದು ಎಂದರು.

12 ಕಡೆಗಳಲ್ಲಿ ದೃಷ್ಠಿ ಆರಂಭ

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ಚಟುವಟಿಕೆಗಳನ್ನು ತಡೆಯಲು ದೃಷ್ಟಿ ಯೋಜನೆಯನ್ನು ಹಮ್ಮಿ ಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 12 ಕಡೆಗಳಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದ್ದು, ಮುಂದೆ ಇನ್ನೂ 21 ಕಡೆಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಉಡುಪಿ ನಗರ, ಶಿರ್ವ ಮತ್ತು ಗಂಗೊಳ್ಳಿ ಠಾಣೆ ವ್ಯಾಪ್ತಿಯಲ್ಲಿ ಎರಡು ಕಡೆ ಹಾಗೂ ಕುಂದಾಪುರ, ಹೆಬ್ರಿ, ಕಾರ್ಕಳ ನಗರ, ಹಿರಿಯಡ್ಕ, ಶಂಕರನಾರಾಯಣ ಮತ್ತು ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಕಡೆ ಸೇರಿದಂತೆ ಒಟ್ಟು 12 ಕಡೆಗಳಲ್ಲಿ ದೃಷ್ಟಿ ಯೋಜನೆಯನ್ನು ಆರಂಭಿಸಲಾಗಿದೆ ಎಂದರು.

ಅಪರಾಧ ಚಟುವಟಿಕೆಗಳನ್ನು ತಡೆಯಲು ಜಿಲ್ಲೆಯ ಆಯ್ದ ನಗರ, ಪೇಟೆ ಪ್ರದೇಶಗಳಲ್ಲಿ ರಾತ್ರಿ ಗಸ್ತಿನ ವ್ಯವಸ್ಥೆಯನ್ನು ಹಮ್ಮಿಕೊಂಡು, ಆ ಮೂಲಕ ಮುಕ್ತವಾಗಿ ಕಳ್ಳತನ, ಮಹಿಳಾ ದೌರ್ಜನ್ಯ, ಮಾದಕ ವ್ಯಸನಿಗಳ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ, ವಾಣಿಜ್ಯ ಸಂಸ್ಥೆಗಳು, ಒಂಟಿ ಮನೆ ನಿವಾಸಿಗಳು ಹಾಗೂ ಹಿರಿಯ ನಾಗರೀಕರ ಸುರಕ್ಷತೆಯ ದೃಷ್ಟಿಯಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಯೋಜನೆಯಡಿಯಲ್ಲಿ ನೇಮಕಗೊಂಡ ಸೆಕ್ಯೂರಿಟಿ ಗಾರ್ಡ್ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6ಗಂಟೆಯವರೆಗೆ ತನಗೆ ನಿಯೋಜಿಸಿದ ಸ್ಥಳದಲ್ಲಿ ಗಸ್ತು ತಿರುಗಾಡಿಕೊಂಡಿದ್ದು, ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಘಟನೆ ಕಂಡು ಬಂದಲ್ಲಿ ತಕ್ಷಣ ಬೀಟ್ ಪೊಲೀಸರಿಗೆ ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡು ತ್ತಾರೆ. ನೇಮಕಗೊಂಡ ಸೆಕ್ಯೂರಿಟಿ ಗಾರ್ಡ್‌ಗೆ ಸಂಭಾವನೆಯನ್ನು ಆ ಪ್ರದೇಶದ ನಾಗರೀಕರು ಭರಿಸುತ್ತಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್, ಕಾರ್ಯದರ್ಶಿ ಡಾ.ವಿಜಯೇಂದ್ರ, ಹೆಚ್ಚುವರಿ ಎಸ್ಪಿ ಸುಧಾಕರ್ ಎಸ್.ನಾಯ್ಕ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News