×
Ad

ಉಡುಪಿ | ಸಂಗೀತ ಸಹಿತ ಎಲ್ಲ ಕ್ಷೇತ್ರಗಳಿಗೂ ಎಐ ಬಹಳ ದೊಡ್ಡ ಸವಾಲು : ಡಾ.ಬಿ.ಎ.ವಿವೇಕ ರೈ

ಎರಡು ದಿನಗಳ ಕರಾವಳಿ ಭಜನಾ ಸಮಾವೇಶ

Update: 2025-12-06 19:57 IST

ಉಡುಪಿ, ಡಿ.6: ನಮ್ಮನ್ನು ಕಳೆದ 20ವರ್ಷಗಳ ಕಾಲ ಮೊಬೈಲ್ ಯುಗ ಆಳಿತು. ಈಗ ಅದನ್ನು ಮೀರಿಸುವ ಡಿಜಿಟಲ್ ಯುಗ ಬಂದಿದೆ. ಅದರಲ್ಲೂ ಕೃತಕ ಬುದ್ದಿಮತ್ತೆ ಎಲ್ಲವನ್ನು ಸೃಷ್ಟಿ ಮಾಡುತ್ತಿದೆ. ಹಾಗಾಗಿ ಮುಂದಿನ ಹಲವು ವರ್ಷಗಳ ಕಾಲ ಕೃತಕ ಬುದ್ದಿಮತ್ತೆ ನಮ್ಮನ್ನು ಆಳಲಿದೆ. ಇವುಗಳಿಂದ ಇಂದು ಆಧ್ಯಾತ್ಮ, ಜನಪದ, ಸಂಸ್ಕೃತಿಗಳು, ಸಂಗೀತ ವಾಣೀಜ್ಯೀಕರಣ ಆಗುತ್ತಿದೆ. ಹೀಗಾಗಿ ನಮಗೆ ಕೃತಕ ಬುದ್ದಿಮತ್ತೆ ಮುಂದೆ ಬಹಳ ದೊಡ್ಡ ಸವಾಲು ಆಗಲಿದೆ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಹಾಗೂ ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವುಗಳ ಸಹಯೋಗದೊಂದಿಗೆ ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿರುವ ಟಿ.ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಕರಾವಳಿ ಭಜನಾ ಸಮಾವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆಧ್ಯಾತ್ಮ ಎಂಬುದು ಈಗ ವ್ಯಾಪಾರದ ಸರಕು ಆಗಿದೆ. ಜನರನ್ನು ವೇಗವಾಗಿ ಮುಟ್ಟುವ ಎಲ್ಲವನ್ನೂ ವ್ಯಾಪಾರೀ ಸಂಸ್ಕೃತಿ ಸೆಳೆದುಕೊಳ್ಳುತ್ತಿದೆ. ಹೀಗೆ ಜನಪದ ಸಂಸ್ಕೃತಿ ಕೂಡ ಸರಕು ಆಗಿದೆ. ಹಾಡು ಎಂಬುದು ವಾಣಿಜ್ಯೀಕರಣ ಆಗುತ್ತಿದೆ. ಹಾಡಿಗೆ ಯಾವುದೇ ಸಾಹಿತ್ಯ ಬೇಡ, ಕುಣಿಯಲು ಸ್ಟೆಪ್ ಸಿಕ್ಕಿದರೆ ಸಾಕಾಗುತ್ತದೆ. ಇವುಗಳ ಮಧ್ಯೆ ನಾವು ಭಜನೆಯನ್ನು ಜನರ ಬಳಿ ಕೊಂಡೊಯ್ಯುವ ಕಾರ್ಯ ಮಾಡಬೇಕು. ಆ ಮೂಲಕ ಅದರ ಸಾಹಿತ್ಯ, ತತ್ವಪದ, ರೂಪಕಗಳನ್ನು ಜನರಿಗೆ ತಲುಪಿಸಬೇಕು. ಅದರ ಆಶಯ, ಸಂದೇಶ, ಪ್ರಸ್ತುತತೆ ಜನರಿಗೆ ತಿಳಿಯಬೇಕು ಎಂದರು.

ಕನಕದಾಸರು ಉಳಿದೆಲ್ಲ ಕೀರ್ತನಕಾರರಿಗಿಂತ ಭಿನ್ನವಾಗಿ, ಕವಿಯಾಗಿ, ಸಂತರಾಗಿ ಬದುಕಿದರು. ಅವರ ಸಂದೇಶವನ್ನು ಇಂಗ್ಲಿಷ್ ಮತ್ತು ಬೇರೆ ಭಾಷೆಗಳಲ್ಲಿ ತೋರಿಸುವ ಅಗತ್ಯ ಇದೆ. ಅವರ ಸಂದೇಶ ಜಾಗತಿಕವಾಗಿ ಮುಟ್ಟಬೇಕು. ಆ ನಿಟ್ಟಿನಲ್ಲಿ ಕನಕದಾಸರ ಸಾಹಿತ್ಯದ ಅನುವಾದ ಕಾರ್ಯ ಅಗತ್ಯವಾಗಿ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ ತ ಚಿಕ್ಕಣ್ಣ ಮಾತನಾಡಿ, ಕನಕದಾಸರು ಭಕ್ತಿಯನ್ನು ಸಾಮಾಜೀಕರಣ ಮಾಡಿಕೊಂಡರು. ಹಾಗಾಗಿ ಅವರು ಎಲ್ಲರಿಗಿಂತಲೂ ಭಿನ್ನರಾಗಿದ್ದರು. ಯುವ ಸಮುದಾಯ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ಮಧ್ಯೆ ನಾವು ಅವರಲ್ಲಿ ಪರಂಪರೆ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡುತ್ತಿಲ್ಲ. ಇಂದಿನ ಶಿಕ್ಷಣ ಎಂಬುದು ಕೇವಲ ಯಂತ್ರ ಮಾನವನನ್ನು ಸೃಷ್ಠಿ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಬದುಕಿನ ಸಂಬಂಧ ರೂಪಿಸುವ ಸಾಂಸ್ಕೃತಿಕ ಚಟುವಟಿಕೆಗಳು ಬಬುಮುಖ್ಯವಾಗುತ್ತದೆ. ಭಜನೆ ಸೇರಿದಂತೆ ವಿವಿಧ ಪ್ರಕಾರಗಳ ಮೂಲಕ ಮನುಷ್ಯ ಮನುಷ್ಯ ಸಂಬಂಧ ಗಾಢಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಹೆ ಸಹ ಕುಲಪತಿ ಡಾ.ನಾರಾಯಣ ಸುಭಾಹಿತ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾರ್ಯಕ್ರಮ ಸಂಯೋಜಕ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.

ಉಡುಪಿ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರಾದ ರಾಮಾಂಜಿ ನಮ್ಮಭೂಮಿ ಮತ್ತು ಸ್ವಪ್ನಾ ರಾಜ್ ನಾಡಗೀತೆ ಹಾಡಿದರು. ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಸಂಚಾಲಕರಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.

‘ತತ್ವಪದಗಳು ಕೀರ್ತನೆ ಹಾಗೂ ರಚನೆಗಳಿಗಿಂತ ಭಿನ್ನವಾಗಿದೆ. ಬದುಕಿನ ನಿಜ ಜೀವನದಲ್ಲಿ ನಾವು ಅನುಸರಿಸಬೇಕಾದ ಸಂಗತಿಗಳು, ದೇಶಿ ಜ್ಞಾನಗಳು ಅದರಲ್ಲಿದೆ. ಧರ್ಮಗಳಲ್ಲಿ ಸಾರಮಸ್ಯ, ಜಾತಿ ತಾರಮತ್ಯ ಮಾಡದಿರು ವುದು, ಹೆಣ್ಣು ಗಂಡು, ಶ್ರೀಮಂತ, ಬಡವ ಎಂಬುದಾಗಿ ಶೋಷಣೆ ಮಾಡದಿರುವುದು, ಆಧುನಿಕ ಜಗತ್ತಿನಲ್ಲಿ ದೌರ್ಜನ್ಯ ನಡೆಸದೇ ಬದುಕುವ ಸಂದೇಶಗಳು ಇವೆ’

-ಡಾ.ಬಿ.ಎ.ವಿವೇಕ ರೈ, ವಿಶ್ರಾಂತ ಕುಲಪತಿ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News