ಉಡುಪಿ | ವಾರಸುದಾರರು ಪತ್ತೆಯಾಗದ ಎರಡು ಮೃತದೇಹಗಳ ದಫನ
ಉಡುಪಿ : ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಎರಡು ಅಪರಿಚಿತ ಮೃತದೇಹಗಳ ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಸೋಮವಾರ ದಫನ ನಡೆಸಲಾಯಿತು.
ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಗೌರವಯುತವಾಗಿ ಪೋಲಿಸರ ಸಮಕ್ಷಮದಲ್ಲಿ ದಫನ ಕಾರ್ಯ ನಡೆಯಿತು. ನಗರ ಪೋಲಿಸ್ ಠಾಣೆಯ ಎ ಎಸ್ ಐ ತಾರಾನಾಥ್, ತನಿಖಾ ಸಹಾಯಕಿ ಜಾಸ್ವ ಮಹಜರು ಪ್ರಕ್ರಿಯೆ ನಡೆಸಿದರು. ನಾಗರಿಕ ಸಮಿತಿಯ ಕಾರ್ಯಕರ್ತರಾದ ಸತೀಶ್ ಪೂಜಾರಿ, ವಿಕಾಸ್ ಶೆಟ್ಟಿ, ಅಶೋಕ್ ಪೂಜಾರಿ, ಪ್ಲವರ್ ವಿಷ್ಣು ದಫನ ಕಾರ್ಯದಲ್ಲಿ ಭಾಗಿಯಾಗಿದ್ದರು. ನಗರಸಭೆ, ಜಿಲ್ಲಾಸ್ಪತ್ರೆ ಸಹಕಾರ ನೀಡಿತು.
ಎರಡು ಅಪರಿಚಿತ ಪುರುಷರ ಮೃತದೇಹಗಳು ಕಳೆದ ಒಂದು ತಿಂಗಳಿಂದ, ಅಜ್ಜರಕಾಡು ಶವ ರಕ್ಷಣಾ ಘಟಕದಲ್ಲಿ ರಕ್ಷಿಸಿಡಲಾಗಿತ್ತು. ಒಂದು ಶವವು ಕುಕ್ಕಿಕಟ್ಟೆಯಿಂದ ಮಂಚಿ ಹೋಗುವ ರಸ್ತೆಯ ಸನಿಹ ಪತ್ತೆಯಾಗಿರುವ ಅಪರಿಚಿತ ವ್ಯಕ್ತಿಯ ಶವವಾಗಿತ್ತು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ರೋಗಿಯೊಬ್ಬರ ಶವವಾಗಿತ್ತು. ವಾರಸುದಾರರ ಪತ್ತೆಗೆ ಪ್ರಕಟಣೆ ನೀಡಲಾಗಿತ್ತು. ಕಾಯುವಿಕೆ ಕಾಲಮಿತಿ ಕಳೆದರೂ, ಯಾರೂ ಸಂಸ್ಕರಿಸದೆ ಇರುವುದರಿಂದ ಕಾನೂನಿನಂತೆ ದಫನ ಮಾಡಲಾಯಿತು.