×
Ad

ಉಡುಪಿ | ಮಕ್ಕಳ ಮನಸ್ಸು ಕನ್ನಡಿ ಇದ್ದಂತೆ: ಮನು ಹಂದಾಡಿ

‘ಮಕ್ಕಳು ಮಕ್ಕಳಾಗಿರಲು ಬಿಡಿ’, ‘ಓ ಮನಸೇ ತುಸು ನಿಧಾನಿಸು’ ಪುಸ್ತಕಗಳ ಲೋಕಾರ್ಪಣೆ

Update: 2025-11-14 19:06 IST

ಉಡುಪಿ, ನ.14: ಮಕ್ಕಳಿಗೆ ತಂದೆ ಅಂದರೆ ಗಟ್ಟಿಯ ಹಿಮಾಲಯ, ತಾಯಿ ಅಂದರೆ ಮಮತೆಯ ಗಂಗೆ. ಮಕ್ಕಳ ಮನಸ್ಸು ಕನ್ನಡಿಯಾಗಿದೆ. ಅದರಲ್ಲಿ ನಮ್ಮ ಪ್ರತಿಬಿಂಬ ಕಾಣಲು ಸಾಧ್ಯ. ಅದನ್ನು ಚೂರುಚೂರು ಮಾಡದೆ ಅದರಲ್ಲಿ ನಮ್ಮನ್ನು ಕಂಡುಕೊಳ್ಳುತ್ತ ಆನಂದವಾಗಿರಬೇಕು ಎಂದು ನಡೂರು ರತ್ನಶೀಲ ಎಜುಕೇಶನ್ ಟ್ರಸ್ಟ್ n ಅಧ್ಯಕ್ಷ, ಕಲಾವಿದ ಮನು ಹಂದಾಡಿ ಹೇಳಿದ್ದಾರೆ.

ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಅವರ ‘ಮಕ್ಕಳು ಮಕ್ಕಳಾಗಿರಲು ಬಿಡಿ’ ಹಾಗೂ ‘ಓ ಮನಸೇ ತುಸು ನಿಧಾನಿಸು’ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಮಕ್ಕಳಿಗೆ ನಿರಾಶವಾದದ ಬದಲು ಆಶಾವಾದವನ್ನು ಕಲಿಸಬೇಕು. ಮಕ್ಕಳಲ್ಲಿರುವ ಕೆಟ್ಟ ಗುಣಗಳನ್ನು ಮಾತ್ರ ಹೇಳುತ್ತಿರುವುದಕ್ಕಿಂತ ಅವರ ಒಳ್ಳೆಯ ಗುಣಗಳನ್ನು ಹೊಗಳಿ ಪ್ರೋತ್ಸಾಹಿಸಬೇಕು. ಆ ಮೂಲಕ ಮಕ್ಕಳನ್ನು ಮಕ್ಕಳಾಗಿ ಇರಲು ಬಿಡಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಗಿರಿಜಾ ಎ. ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಭಿಲಾಷಾ ಹಂದೆ, ಜಾದೂಗಾರ ಶಂಕರ್ ಜೂನಿಯರ್(ತೇಜಸ್ವಿ) ಮಾತನಾಡಿದರು.

ಲೇಖಕ ಡಾ.ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವೀಣಾ ವಿರೂಪಾಕ್ಷ ಸ್ವಾಗತಿಸಿದರು. ಬಳಿಕ ಅಂತರರಾಷ್ಟ್ರೀಯ ಜಾದೂಗಾರ ಶಂಕರ್ ಜೂನಿಯರ್ ಅವರಿಂದ ವಿಶೇಷ ಮ್ಯಾಜಿಕ್ ಪ್ರದರ್ಶನ ನಡೆಯಿತು. ಅದೇ ರೀತಿ ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನ ಮತ್ತು ವಿಶೇಷ ಚಿತ್ರಕಲಾ ಪ್ರದರ್ಶನ ಜರಗಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News