ಎಸ್‌ಐಆರ್ ಅರ್ಜಿಗಳನ್ನು ತುಂಬಿ ತ್ವರಿತವಾಗಿ ಬಿಎಲ್‌ಒಗಳಿಗೆ ನೀಡಿ: ಸಾರ್ವಜನಿಕರಿಗೆ ಉಡುಪಿ ಜಿಲ್ಲಾಧಿಕಾರಿ ಮನವಿ
ಉಡುಪಿ: ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒ) ಈಗಾಗಲೇ ಬಹುತೇಕ ಮನೆ ಮನೆಗಳಿಗೆ ತೆರಳಿ ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಿದ್ದು, ಮತದಾರರು ಅವುಗಳನ್ನು ಭರ್ತಿ ಮಾಡಿ ತ್ವರಿತವಾಗಿ ಮತಗಟ್ಟೆ ಅಧಿಕಾರಿಗಳಿಗೆ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಯ ನಿಖರತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಕಾರಾತ್ಮಕವಾಗಿ ಸಹಕರಿಸಬೇಕು. ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಗಣತಿ ನಮೂನೆಗಳ ವಿತರಣೆಯ ಕಾರ್ಯವು ಈಗಾಗಲೇ ಶೇ.99.97ರಷ್ಟು ಪೂರ್ಣಗೊಂಡಿದೆ. ಸಾರ್ವಜನಿಕರು ಗಣತಿ ನಮೂನೆಗಳನ್ನು ಭರ್ತಿ ಮಾಡಿ ತ್ವರಿತವಾಗಿ ಬಿಎಲ್‌ಒಗೆ ನೀಡಿ ನೀಡಬೇಕು ಎಂದರು.
ಗಣತಿ ನಮೂನೆಗಳನ್ನು ಬೇಗನೆ ಭರ್ತಿ ಮಾಡಿ ನೀಡಿದಲ್ಲಿ ಅವುಗಳ ಡಿಜಿಟಲೀಕರಣ ಕಾರ್ಯ ಕೈಗೊಳ್ಳಲು ಬಿಎಲ್‌ಒಗಳಿಗೆ ಅನುಕೂಲವಾಗ ಲಿದೆ. ಕೊನೆಗಳಿಗೆಯಲ್ಲಿ ನೀಡಿದಲ್ಲಿ ಗೊಂದಲಗಳು ಉಂಟಾಗುವ ಸಾಧ್ಯತೆ ಗಳಿರುತ್ತವೆ. ಆದಷ್ಟು ಬೇಗ ಗಣತಿ ನಮೂನೆಗಳನ್ನು ನೀಡಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ118-ಬೈಂದೂರು, 119-ಕುಂದಾಪುರ, 121-ಕಾಪು ಹಾಗೂ 122-ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ ನೂರರಷ್ಟು ಮತದಾರರಿಗೆ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದೆ. 120-ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 425 ಎನ್ಯುಮರೇಷನ್ ಫಾರ್ಮ್ ಗಳ ವಿತರಣೆಗೆ ಬಾಕಿ ಇದ್ದು, ಇದಾದರೆ ಪ್ರತೀಶತ ನೂರರಷ್ಟು ಪೂರ್ಣ ಗೊಳುವಂತೆ ಮಾಡುವುದು ಬಿಎಲ್‌ಒ ಹಾಗೂ ಬಿಎಲ್‌ಎಗಳ ಜವಾಬ್ದಾರಿ ಯಾಗಿದೆ ಎಂದರು.
ಭಾರತ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು ಸಂಪೂರ್ಣ ಪಾರದರ್ಶಕತೆಯಿಂದ ಕೂಡಿದ್ದು, ಇದರಲ್ಲಿ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಸಹಭಾಗಿತ್ವವೂ ಅತ್ಯಗತ್ಯವಾಗಿದೆ ಎಂದರು.
ಗಣತಿ ನಮೂನೆಗಳನ್ನು ಭರ್ತಿ ಮಾಡುವಾಗ ಸಾರ್ವಜನಿಕರಲ್ಲಿ ಉಂಟಾಗುವ ಗೊಂದಲಗಳನ್ನು ತಪ್ಪಿಸಲು ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಫಾರ್ಮ್‌ಗಳಲ್ಲಿನ ಮೊದಲ ಭಾಗ ಹಾಗೂ ಎರಡನೇ ಭಾಗಗಳನ್ನು ಭರ್ತಿ ಮಾಡುವಾಗ ಆಗುವ ಸಾಮಾನ್ಯ ತಪ್ಪುಗಳನ್ನು ತಪ್ಪಿಸಲು ಬಿಎಲ್‌ಒ ಮತ್ತು ಬಿಎಲ್‌ಎಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಬೂತ್ ಮಟ್ಟದ ಏಜೆಂಟರುಗಳು ಈ ಕಾರ್ಯದಲ್ಲಿ ಸಂಪೂರ್ಣ ಸಹಕರಿಸಬೇಕು ಎಂದರು
ಜಿಲ್ಲೆಯಲ್ಲಿ ಅತ್ಯಂತ ಪಾರದರ್ಶಕ ಹಾಗೂ ದೋಷಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸಲು ಎಲ್ಲಾ ರಾಜಕೀಯ ಪಕ್ಷಗಳು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಅಧಿಕಾರಿ- ಸಿಬ್ಬಂದಿ ಹಾಗೂ ಜಿಲ್ಲೆಯ ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಈವರೆಗೆ ಶೇ.99.97 ಗಣತಿ ನಮೂನೆ ವಿತರಣೆ
ಜಿಲ್ಲೆಯಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-2026) ಪ್ರಕ್ರಿಯೆಯು ವ್ಯವಸ್ಥಿತವಾಗಿ ನಡೆಯು ತ್ತಿದ್ದು, ಇಂದಿನವರೆಗೆ (ಜುಲೈ 14) ಜಿಲ್ಲೆಯಲ್ಲಿ ಒಟ್ಟು 10,63,876 ಮತದಾರರಲ್ಲಿ 10,63,451 ಮತದಾರ ರಿಗೆ ಎನ್ಯೂಮರೇಶನ್ ಫಾರ್ಮ್‌ಗಳನ್ನು ವಿತರಿಸಿ, ಶೇ.99.97 ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.
ಜನತೆ ಭರ್ಜಿ ಮಾಡಿ ಹಿಂದಿರುಗಿಸಿದ ಗಣತಿ ನಮೂನೆಗಳಲ್ಲಿ 3,22,027 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಗೊಳಿಸಿ ಶೇ.30.27ರಷ್ಟು ಪ್ರಗತಿ ಸಾಧಿಸಲಾಗಿದೆ. ಈವರೆಗೆ 1647 ಮತದಾರರು ಮೃತಪಟ್ಟಿರುವುದು ಮನೆ ಭೇಟಿಯ ವೇಳೆ ಕಂಡುಬಂದಿದೆ. 1166 ಮತದಾರರು ಖಾಯಂ ಆಗಿ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದು, 396 ಮತದಾರರು ತಮ್ಮ ದಾಖಲಾತಿ ಮಾಡಿರುತ್ತಾರೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.