×
Ad

UDUPI | ಸಾಸ್ತಾನ ಟೋಲ್ ಪ್ಲಾಝಾದಲ್ಲಿ ನಿವೃತ್ತ ಯೋಧರಿಗೆ ಅವಮಾನ: ವಿಡಿಯೋ ವೈರಲ್

Update: 2026-01-26 12:26 IST

ಕೋಟ, ಜ.26: ಸಾಸ್ತಾನ ಟೋಲ್ ಪ್ಲಾಝಾದಲ್ಲಿ ಗಣರಾಜ್ಯೊತ್ಸವದ ಮುನ್ನ ದಿನ ರವಿವಾರ ರಾತ್ರಿ ನಿವೃತ್ತ ಯೋಧರೊಬ್ಬರಿಗೆ ಅವಮಾನ ಮಾಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಯೋಧ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಸರಗೋಡು ಜಿಲ್ಲೆಯ ಶ್ಯಾಮರಾಜ್, ಇವಿ 21ನೇ ಪ್ಯಾರಾ ಸ್ಪೇಶಲ್ ಫೋರ್ಸ್ ನ ಪ್ಯಾರಾಟ್ರೂಪರ್ ಆಗಿದ್ದು, ಇವರು ಸಾಸ್ತಾನದ ಟೋಲ್ ಮೂಲಕ ಸಾಗುತ್ತಿದ್ದರು. ಅವರಲ್ಲಿ ಟೋಲ್ ವಿನಾಯಿತಿ ಬಗ್ಗೆ ಪತ್ರವಿದ್ದರೂ, ಟೋಲ್ ವಿನಾಯಿತಿ ನೀಡುವುದಕ್ಕೆ ಟೋಲ್ ಪ್ಲಾಝಾ ಸಿಬ್ಬಂದಿ ನಿರಾಕರಿಸಿದರೆ ನ್ನಲಾಗಿದೆ. ಶ್ಯಾಮರಾಜ್ ಅವರ ಪತ್ನಿ ಕೂಡ ಮಿಲಿಟರಿ ನರ್ಸಿಂಗ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಪೋಸ್ಟಿಂಗ್ ಗಾಗಿ ಸಾಸ್ತಾನ ಮೂಲಕ ತೆರಳುತ್ತಿದ್ದರು.

ಈ ಬಗ್ಗೆ ಸ್ವತಃ ಶ್ಯಾಮರಾಜ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ದೇಶದ ಎಲ್ಲಾ ಟೋಲ್ ಗಳಲ್ಲಿ ವಿನಾಯಿತಿ ನೀಡಿದರೂ ಸಾಸ್ತಾನ ಟೋಲ್ ನಲ್ಲಿ ವಿನಾಯಿತಿ ನೀಡಿಲ್ಲ. ಇದಕ್ಕೆ ಸಂಬಂಧಿತ ಆರ್ಎಂಎ ನೀಡಿದ ಟೋಲ್ ವಿನಾಯಿತಿ ಪತ್ರ ತೋರಿಸಿದರೂ ಸಿಬ್ಬಂದಿ ವಿನಾಯಿತಿ ನೀಡಿಲ್ಲ ಎಂದು ದೂರಿದ್ದಾರೆ.

ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಗಣರಾಜ್ಯೋತ್ಸವ ದಿನದಂದು ನಿವೃತ್ತ ಸೈನಿಕನೋರ್ವನಿಗೆ ಮಾಡಿದ ಅವಮಾನದ ಬಗ್ಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಬಳಿಕ ಟೋಲ್ ಸಿಬ್ಬಂದಿ ತನ್ನ ತಪ್ಪನ್ನು ಅರಿತು ಶ್ಯಾಮರಾಜ್ ಅವರಲ್ಲಿ ಕ್ಷಮೇಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.

ಶ್ಯಾಮರಾಜ್ ಆಪರೇಶನ್ ಪರಾಕ್ರಮ್ ವೇಳೆ ಉಗ್ರರ ವಿರುದ್ಧ ಜಯ ಸಾಧಿಸಿ ವಾಪಸ್ ಬರುತ್ತಿದ್ದ ವೇಳೆ ಇವರ ವಾಹನ ಲ್ಯಾಂಡ್ ಮೈನ್ಸ್ ಮೇಲೆ ಹರಿದ ಪರಿಣಾಮ, ಲ್ಯಾಂಡ್ ಮೈನ್ಸ್ ಸ್ಫೋಟಗೊಂಡಿದ್ದರಿಂದ ವಾಹನ ಜಖಂಗೊಂಡಿತ್ತು. ಈ ಘಟನೆಯಲ್ಲಿ 15 ಸೈನಿಕರು ಹುತಾತ್ಮರಾಗಿ, ಇಬ್ಬರು ಸೈನಿಕರು ಬದುಕುಳಿದಿದ್ದರು. ಬದುಕುಳಿದ ಸೈನಿಕರಲ್ಲಿ ಶ್ಯಾಮರಾಜ್ ಕೂಡ ಒಬ್ಬರು. 15 ದಿನಗಳ ಕಾಲ ಕೋಮಾದಲ್ಲಿ ನಂತರ ಯಥಾಸ್ಥಿತಿಗೆ ಬಂದರೂ ಬೆನ್ನುಹುರಿಗೆ ಗಂಭೀರ ಗಾಯವಾಗಿದ್ದರಿಂದ ಶ್ಯಾಮರಾಜ್ ಸಂಪೂರ್ಣ ವಿಕಲಾಂಗರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News