ಕೃತಕ ಬುದ್ದಿಮತ್ತೆಯಿಂದ ಸೃಷ್ಠಿಶೀಲ ಮನಸ್ಸುಗಳು ನಾಶ: ಟಿ.ಎನ್.ಸೀತಾರಾಂ ಆತಂಕ
ಉಡುಪಿ: ಕೃತಕ ಬುದ್ದಿಮತ್ತೆ ಎಂಬುದು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮೂಡಿಸುತ್ತಿದೆ. ಆದರೆ ಅದು ಸಾಹಿತ್ಯ, ಸಂಸ್ಕೃತಿಗಳ ಕ್ಷೇತ್ರಕ್ಕೆ ಕಾಲಿಟ್ಟರೆ ಸೃಷ್ಠಿಶೀಲ ಮನಸ್ಸುಗಳು ನಾಶವಾಗಿ ದೊಡ್ಡ ಅಪಾಯ ಉಂಟು ಮಾಡುವ ಸಾಧ್ಯತೆ ಇದೆ. ಅದರ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದು ಸಾಹಿತಿ, ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಂ ಆತಂಕ ವ್ಯಕ್ತಪಡಿಸಿದ್ದಾರೆ.
ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಕಾರದೊಂದಿಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಸಂಸ್ಕೃತಿ ಉತ್ಸವದ ಎರಡನೆ ದಿನವಾದ ರವಿವಾರ ಉಡುಪಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಕೃತಕ ಬುದ್ಧಿಮತ್ತೆಯ ಅನುಕೂಲಗಳನ್ನು ನಾವು ಸ್ವಾಗತಿಸಬೇಕು ಮತ್ತು ಯಾವುದೇ ಕಾರಣಕ್ಕೂ ನಿರಾಕರಿಸಬಾ ರದು. ಕೃತಕ ಬುದ್ದಿಮತ್ತೆಗೆ ಎಷ್ಟೇ ಬುದ್ದಿ ಇರಬಹುದು. ಆದರೆ ಹೃದಯ ಕಣ್ಣೀರು ಅರ್ಥ ಮಾಡಲು ಅದಕ್ಕೆ ಸಾಧ್ಯ ಇಲ್ಲ. ಆದುದರಿಂದ ಮುಂದೆ ಇದರ ಜೊತೆ ಪ್ರತಿ ಹಂತದಲ್ಲೂ ಯುದ್ಧ ಮಾಡುವ ಸ್ಥಿತಿ ಬರಲಿದೆ ಎಂದರು.
ಕೃತಕ ಬುದ್ದಿಮತ್ತೆಯ ಪರಿಣಾಮವಾಗಿ ಲಕ್ಷಾಂತರ ಮಂದಿ ಕೆಲಸ ಕಳೆದು ಕೊಳ್ಳಲಿದ್ದಾರೆ. ಈ ಜಗತ್ತಿನಲ್ಲಿ ನಿರು ದ್ಯೋಗ ಸಂಖ್ಯೆ ಕೋಟಿಗೆ ತಂದು ಇಡುವ ಸ್ಥಿತಿಯನ್ನು ಕೃತಕ ಬುದ್ದಿಮತ್ತೆ ಸೃಷ್ಠಿಸುತ್ತದೆ. ಈ ಸವಾಲನ್ನು ನಾವು ಸ್ವೀಕರಿಸ ಬೇಕು. ಇಲ್ಲದಿದ್ದರೆ ಇಲ್ಲಿ ಮನುಷ್ಯರು ಉಳಿಯುವುದಿಲ್ಲ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಹಿರಿಯ ವಿದ್ವಾಂಸ ನಾಡೋಜ ಪ್ರೊ.ಕೆ.ಪಿ.ರಾವ್ ವಹಿಸಿದ್ದರು. ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನಾ ಮಾತುಗಳನ್ನಾಡಿದರು. ಲೇಖಕ ಜೋಗಿ, ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ್, ಪಂಚಮಿ ಟ್ರಸ್ಟ್‌ನ ಸಂಸ್ಥಾಪಕ ಡಾ.ಎಂ.ಹರಿಶ್ಚಂದ್ರ ಮುಖ್ಯ ಅತಿಥಿಗಳಾಗಿದ್ದರು.
ಉದ್ಯಮಿ ಸುಗುಣ ಸುವರ್ಣ, ಕಲಾ ಪೋಷಕ ಭುವನಪ್ರಸಾದ್ ಹೆಗ್ಡೆ, ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಸ್ಟ್ರೋ ಮೋಹನ್ ಸ್ವಾಗತಿಸಿದರು. ಪುರಸ್ಕಾರ ಸಮಿತಿಯ ಸಂಯೋಜಕ ಜನಾರ್ದನ ಕೊಡವೂರು ವಂದಿಸಿದರು. ವಿದ್ಯಾ ಶ್ಯಾಮಸುಂದರ್ ಸನ್ಮಾನ ಪತ್ರ ವಾಚಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರಿಂದ ಗುಲಾಮನ ಸ್ವಾತಂತ್ರ್ಯ ಯಾತ್ರೆ ನಾಟಕ ಪ್ರದರ್ಶನಗೊಂಡಿತು.
ಗುರು ಲಂಕೇಶರನ್ನು ನೆನಪಿಸಿದ ಸೀತಾರಾಮ್!
ಇದೇ ದಿನ ನನ್ನ ಗುರು ಪಿ.ಲಂಕೇಶ್ ತೀರಿಹೋಗಿರುವುದು. ಇಂದಿಗೆ 25ವರ್ಷಗಳಾಗಿವೆ. ಲಂಕೇಶ್ ಅವರು ನನ್ನನು ಮನುಷ್ಯರನ್ನಾಗಿ ಮಾಡಿದರು. ಅವರ ನಾಟಕಗಳಲ್ಲಿ ನಾನು ಮುಖ್ಯ ಪಾತ್ರ ವಹಿಸುತ್ತಿದ್ದೆ. ಅವರ ಪಲ್ಲವಿ ಸಿನೆಮಾ ದಲ್ಲಿ ನನಗೆ ನಾಯಕನಾಗಿ ನಟಿಸುವ ಅವಕಾಶ ಮಾಡಿಕೊಟ್ಟರು. ಅವರ ದೃಷ್ಠಿಕೋನ ಸಾಮಾನ್ಯರನ್ನು ಗುರುತಿ ಸುವುದು. ಇದು ನನ್ನ ಬದುಕಿನ ಬಹಳ ದೊಡ್ಡ ಪಾಠ ಮತ್ತು ದೀಪ ಎಂದು ಭಾವಿಸುತ್ತೇನೆ. ಆದುದರಿಂದ ನನ್ನ ಸಾಧನೆಗೆ ದೊರೆತ ಈ ಪ್ರಶಸ್ತಿಯಲ್ಲಿ ಮುಖ್ಯ ಪಾಲು ಲಂಕೇಶ್ ಅವರಿಗೆ ಸಲ್ಲಬೇಕು ಎಂದು ಟಿ.ಎನ್.ಸೀತಾರಾಂ ತಿಳಿಸಿದರು.