×
Ad

ಉಡುಪಿ | 77ನೇ ಗಣರಾಜ್ಯೋತ್ಸವ: ಸೈಂಟ್ ಮೇರಿಸ್ ಐಲ್ಯಾಂಡ್‌ನಲ್ಲಿ ಧ್ವಜಾರೋಹಣ

ಕರಾವಳಿ ಪ್ರವಾಸೋದ್ಯಮ ಭವಿಷ್ಯಕ್ಕೆ ಹೊಸ ಬಾಗಿಲು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2026-01-26 09:58 IST

 ಉಡುಪಿ: ಜಿಲ್ಲೆಯ ವಿವಿಧ ದ್ವೀಪಗಳನ್ನೂ ಸೇರಿಸಿಕೊಂಡು, ಸಂಪೂರ್ಣ ಕರಾವಳಿ ಭಾಗದಲ್ಲಿ ಹೊಸ ದೃಷ್ಟಿಕೋನದಿಂದ ಪ್ರವಾಸೋದ್ಯಮ ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಇದು ಕೇವಲ ಕರಾವಳಿ ಭಾಗಕ್ಕಷ್ಟೇ ಅಲ್ಲದೆ, ರಾಜ್ಯದ ಮತ್ತು ದೇಶದ ಭವಿಷ್ಯಕ್ಕೆ ಹೊಸ ಬಾಗಿಲು ತೆರೆಯುತ್ತದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಮೊದಲ ಬಾರಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಈ ದ್ವೀಪ ಸೇರಿದಂತೆ ರಾಜ್ಯದಲ್ಲಿರುವ 116 ಐಲ್ಯಾಂಡ್ ಗಳೂ ನಿರ್ಲಕ್ಷ್ಯಕ್ಕೊಳಗಾಗಿವೆ. ಇಂತಹ ಅತ್ಯದ್ಭುತ ಸಂಪನ್ಮೂಲಗಳಿದ್ದರೂ ನಾವು ಪ್ರವಾಸೋದ್ಯಮದ ದೃಷ್ಟಿಯಿಂದ ಬಳಸಿಕೊಳ್ಳಲು ವಿಫಲರಾಗಿದ್ದೇವೆ. ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಕರಾವಳಿ ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಇಡೀ ದಿನ ವಿಚಾರಸಂಕಿರಣವೊಂದನ್ನು ಆಯೋಜಿಸಲಾಗಿತ್ತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕರಾವಳಿ ಜಿಲ್ಲೆಗಳ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.

ಇಷ್ಟು ವರ್ಷಗಳ ಕಾಲ ನಿರ್ಲಕ್ಷ್ಯಕ್ಕೊಳಗಾಗಿರುವ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಸಲು ನಾವು ಹೆಜ್ಜೆ ಇಟ್ಟಿದ್ದೇವೆ. ರಾಜ್ಯ ಸರಕಾರದ ಈ ಹೊಸ ಯೋಜನೆಗೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ನಿಮ್ಮೆಲ್ಲರ ಸಲಹೆ, ಮಾರ್ಗದರ್ಶನದೊಂದಿಗೆ ಮುಂದಿನ ದಿನಗಳಲ್ಲಿ ಈ ಭಾಗವನ್ನು ಅಭಿವೃದ್ದಿಪಡಿಸೊಣ ಎಂದು ಸಚಿವೆ ಹೇಳಿದರು.

ಈ ಸಂದರ್ಭದಲ್ಲಿ ಬಹಳ ಅಪರೂಪದ ಕಾರ್ಯಕರ್ಮದಲ್ಲಿ ನಾವು - ನೀವೆಲ್ಲ ಭಾಗವಹಿಸಿದ್ದೇವೆ. ಕರ್ನಾಟಕದ ಅತೀ ದೊಡ್ಡ ಐಲ್ಯಾಂಡ್ ಎನ್ನುವ ಹೆಮ್ಮೆಗೆ ಕೂಡ ಪಾತ್ರವಾಗಿರುವ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಇಂದು ಧ್ವಜಾರೋಹಣ ನೆರವೇರಿಸುವ ಮತ್ತು ನಿಮ್ಮನ್ನೆಲ್ಲ ಉದ್ಧೇಶಿಸಿ ಮಾತನಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ನಾನು ಬರುವಾಗ ಮೊಟ್ಟ ಮೊದಲ ಬಾರಿಗೆ ಕರಾವಳಿ ಕಾವಲು ಪಡೆಯ 11 ಬೋಟ್ ಗಳನ್ನು ಇನಸ್ಪೆಕ್ಷನ್ ಮಾಡುತ್ತ ಬಂದೆ. ಇದು ನನಗೆ ಬಹಳ ರೋಮಾಂಚಕಾರಿ ಅನುಭವವಾಗಿದೆ ಎಂದರು.

ಇಲ್ಲಿ ಕರಾವಳಿ ಕಾವಲುಪಡೆಯ ಪೊಲೀಸರಿದ್ದೀರಿ, ಉದ್ಯೋಗದ ಜೊತೆಗೆ ರಾಷ್ಟ್ರ ರಕ್ಷಣೆಯಲ್ಲೂ ಮಾಹಿತಿದಾರರಾಗಿ ಕೆಲಸ ಮಾಡುತ್ತಿರುವ ಮೀನುಗಾರರಿದ್ದೀರಿ, ಬೀಚ್ ಸ್ವಚ್ಛತೆಗೆಂದು ಬಂದಿರುವ ಸ್ವಯಂ ಸೇವಕರಿದ್ದೀರಿ, ಕರಾವಳಿ ನಾವಿಕ ದಳದ ಸಿಬ್ಬಂದಿ ಇದ್ದೀರಿ. ನಮ್ಮ ದೇಶದ ಸುರಕ್ಷತೆಗಾಗಿ ಮತ್ತು ನಮ್ಮ ದೇಶದ ಜನರ ಸುರಕ್ಷತೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲು -ರಾತ್ರಿ ಕೆಲಸ ಮಾಡುತ್ತಿರುವ ನೀವೆಲ್ಲ ನನ್ನ ದೃಷ್ಟಿಯಲ್ಲಿ ನಿಜವಾದ ದೇಶಭಕ್ತರು, ನಿಜವಾದ ಹೀರೋಗಳು. ನಿಮ್ಮ ಸೇವೆಗೆ ನಾನು ನಮಸ್ಕಾರಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನಿಮ್ಮ ಸುರಕ್ಷತೆಗೂ ಗಮನ ನೀಡುವುದನ್ನು ಮರೆಯಬೇಡಿ ಎಂದು ಸಚಿವರು ವಿನಂತಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪಾ, ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News