×
Ad

ಉಡುಪಿ | ಬ್ಯಾಂಕಿನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ

ಐವರು ಆರೋಪಿಗಳ ಬಂಧನ: 4.30ಲಕ್ಷ ರೂ. ನಗದು, ಸೊತ್ತು ವಶ

Update: 2025-11-10 20:46 IST

ಉಡುಪಿ, ನ.10: ಬ್ಯಾಂಕಿನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಆರೋಪಿಗಳನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಅಂಬಲಪಾಡಿ ಗ್ರಾಮದ ಕಪ್ಪೆಟ್ಟು ನಿವಾಸಿ ಪುನೀತ್ ಆನಂದ ಕೋಟ್ಯಾನ್, ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರದ ಸುದೀಪ್, ಕಟಪಾಡಿ ಏಣಗುಡ್ಡೆಯ ರಂಜನ್ ಕುಮಾರ್, ಪೆರ್ಡೂರು ಅಲಂಗಾರು ನಿವಾಸಿ ಸರ್ವಜೀತ್ ಎಚ್.ಕೆ., ಮಹಾರಾಷ್ಟ್ರದ ಪುಣೆಯ ರಾಜೇಶ್ ದೀಲೀಪ್ ಪಾಟೇಲ್ ಬಂಧಿತ ಆರೋಪಿಗಳು. ಇವರಿಂದ 4,30,000 ರೂ. ನಗದು ಹಣ ಹಾಗೂ ನಕಲಿ ಹಾಲ್ ಮಾರ್ಕ್ ಹಾಕಲು ಬಳಸಿದ್ದ ಲೇಸರ್ ಯಂತ್ರ ಹಾಗೂ ಕಂಪ್ಯೂಟರ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಕರ್ನಾಟಕ ಬ್ಯಾಂಕ್ ಕಟ್ಟಿಂಗೇರಿ ಬ್ರಾಂಚ್ ನಲ್ಲಿ ಆರೋಪಿಗಳು ನಕಲಿ ಚಿನ್ನಾಭರಣಗಳನ್ನು ಅಸಲಿ ಎಂಬುದಾಗಿ ನಂಬಿಸಿ ಅಡಮಾನ ಇರಿಸಿ ಸಾಲ ಪಡೆದು ವಂಚನೆ ಎಸಗಿರುವ ಬಗ್ಗೆ ಅ.30ರಂದು ಶಿರ್ವ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.

ಉಡುಪಿ ಜಿಲ್ಲೆಯಲ್ಲಿ ನಕಲಿ ಚಿನ್ನಾಭರಣಗಳನ್ನು ಇರಿಸಿ ಸಾಲ ಪಡೆಯುವರ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಅಲಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿ ಬೆಂಗಳೂರು, ಗೋವಾ, ಮುಂಬೈ ಹಾಗೂ ದೆಹಲಿಯಲ್ಲಿ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಪ್ರಕರಣದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿಯೂ ಇವರು ನಕಲಿ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಇರಿಸಿ ಸಾಲ ಪಡೆದ ಬಗ್ಗೆ ತಿಳಿದು ಬಂದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿವೆ.

ಈ ಕಾರ್ಯಾಚರಣೆಯಲ್ಲಿ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಡಾ.ಹರ್ಷ ಪ್ರಿಯಂವದಾ ಮತ್ತು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಮಾರ್ಗ ದರ್ಶನದಲ್ಲಿ ಶಿರ್ವ ಪೊಲೀಸ್ ಠಾಣಾ ಎಸ್ಸೈ ಮಂಜುನಾಥ ಮರಬದ, ಲೋಹಿತ್ ಕುಮಾರ್, ಪಡುಬಿದ್ರೆ ಪೊಲೀಸ್ ಠಾಣಾ ಎಸ್ಸೈ ಅನಿಲ್ ಕುಮಾರ್ ಟಿ.ನಾಯ್ಕ್, ಶ್ರೀಧರ್ ಕೆ.ಜೆ. ಹಾಗೂ, ಶಿರ್ವ ಪೊಲೀಸ್ ಠಾಣಾ ಸಿಬ್ಬಂದಿ ಕಿಶೋರ್, ಮಂಜುನಾಥ, ಅರುಣ್, ಸಿದ್ದರಾಯಪ್ಪ, ನಾಗರಾಜ ಹಾಗೂ ಪಡುಬಿದ್ರೆ ಠಾಣಾ ಸಿಬಂದಿ ನಾಗರಾಜ ಪಾಲ್ಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News