×
Ad

ಉಡುಪಿ | ಡಿ.21ರಂದು ವಿದ್ಯಾರ್ಥಿವೇತನಕ್ಕೆ ಪ್ರತಿಭಾನ್ವೇಷಣಾ ಪರೀಕ್ಷೆ

Update: 2025-12-05 21:49 IST

ಉಡುಪಿ, ಡಿ.5: ನಗರದ ಕಿದಿಯೂರು ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಹೈದರಾಬಾದಿನ ಆರ್‌ಜಿಎಫ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೂರಿನ ಲಾರ್ಡ್ಸ್ ಇಂಟರ್‌ನೇಷನಲ್ ರೆಸಿಡೆನ್ಷಿಯಲ್ ಸ್ಕೂಲ್‌ನ ಆಶ್ರಯದಲ್ಲಿ ಉಡುಪಿ ಆಸುಪಾಸಿನ ಒಂದರಿಂದ 9ನೇ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ವೇತನಕ್ಕಾಗಿ ಇದೇ ಡಿ.21ರಂದು ಬೆಳಗ್ಗೆ 10ರಿಂದ 12ಗಂಟೆಯವರೆಗೆ ಪ್ರತಿಭಾನ್ವೇಷಣೆ ಪರೀಕ್ಷೆ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಭುವನೇಂದ್ರ ಕಿದಿಯೂರು ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊಟೇಲ್ ಉದ್ಯಮಿಯೂ ಆಗಿರುವ ಭುವನೇಂದ್ರ ಕಿದಿಯೂರು ಉಡುಪಿ, ಆಸುಪಾಸಿನಲ್ಲಿರುವ ಎಲ್ಲಾ ಶಾಲೆಗಳ, ಎಲ್ಲಾ ಪಠ್ಯಕ್ರಮಗಳಲ್ಲಿ ಕಲಿಯುತ್ತಿರುವ ಒಂದರಿಂದ 9ನೇ ತರಗತಿಯ ವಿದ್ಯಾಥಿಗಳು ಇದರಲ್ಲಿ ಭಾಗವಹಿಸಬಹುದು ಎಂದರು.

ಒಟ್ಟು ಮೂರು ಕೋಟಿ ರೂ. ವಿದ್ಯಾರ್ಥಿ ವೇತನ ನೀಡುವ ಗುರಿಯಿದ್ದು, ಪ್ರತಿ ವಿಭಾಗದಿಂದ ತಲಾ 10 ಮಂದಿ ಟಾಪರ್‌ಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಯೂ ಹತ್ತನೇ ತರಗತಿ ಉತ್ತೀರ್ಣರಾಗುವವರೆಗೆ ವಿದ್ಯಾರ್ಥಿ ವೇತನ ಪ್ರತಿವರ್ಷ ನೀಡಲಾಗುವುದು ಎಂದು ಅವರು ವಿವರಿಸಿದರು.

ಉಡುಪಿ ಕಿದಿಯೂರು ಹೊಟೇಲಿನ ಅನಂತಶಯನ ಸಭಾಂಗಣದಲ್ಲಿ ಡಿ.21ರಂದು ಈ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಮೊದಲೇ ಹೆಸರು ನೊಂದಾಯಿಸಬಹುದು ಅಥವಾ ಪರೀಕ್ಷಾ ಸ್ಥಳದಲ್ಲಿ ಅದೇ ದಿನ ಹೆಸರು ನೊಂದಾಯಿಸಿ ನೇರವಾಗಿ ಪರೀಕ್ಷೆ ಬರೆಯಬಹುದು ಎಂದರು. ಒಟ್ಟು ಸುಮಾರು 3000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ ಇದೆ ಎಂದರು.

ಹೈದರಾಬಾದ್‌ನ ಆರ್‌ಜಿಎಫ್ ಸಂಸ್ಥೆಯ ಸಿಇಓ ರವೀಂದ್ರ ನಾಯ್ದು ಮಾತನಾಡಿ, ಅದೇ ದಿನ ಮಕ್ಕಳ ಹೆತ್ತವರು ಹಾಗೂ ಪೋಷಕರಿಗೂ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿದೆ. ಮಕ್ಕಳ ಪಾಲನಾ ಕೌಶಲ್ಯ, ಮಾಹಿತಿ ಹಾಗೂ ಅರಿವು ಕಾರ್ಯಾಗಾರ ನಡೆಯಲಿದೆ ಎಂದರು.

ಲಾರ್ಡ್ಸ್ ಇಂಟರ್‌ನೇಷನಲ್ ರೆಸಿಡೆನ್ಷಿಯಲ್ ಸ್ಕೂಲ್‌ನಲ್ಲಿ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಸ್ಪಾರ್ಕ್ ಕಾರ್ಯಕ್ರಮ ಹಾಗೂ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂಟೆಗ್ರೇಟೆಡ್ ಫೌಂಡೇಷನ್ ಕೋಚಿಂಗ್‌ನ್ನು ನೀಡಲಾಗುತ್ತಿದೆ. ಇದರಿಂದ 10ನೇ ತರಗತಿಯಿಂದ ಹೊರಬರುವ ವಿದ್ಯಾರ್ಥಿ ಮುಂದಿನ ಗುರಿಯ ಕುರಿತು ಸ್ಪಷ್ಟತೆಯನ್ನು ಹೊಂದಿರುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನವೀನ್ ಶೆಟ್ಟಿ, ವಿಲಾಸ್‌ಕುಮಾರ್ ಹಾಗೂ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News