ಉಡುಪಿ | ಎರಡು ದಿನಗಳ ಕರಾವಳಿ ಭಜನಾ ಸಮಾವೇಶ ಸಮಾರೋಪ
ಉಡುಪಿ, ಡಿ.7: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಹಾಗೂ ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವುಗಳ ಸಹಯೋಗದೊಂದಿಗೆ ಎರಡು ದಿನಗಳ ಕರಾವಳಿ ಭಜನಾ ಸಮಾವೇಶದ ಸಮಾರೋಪ ಸಮಾರಂಭ ಉಡುಪಿ ಎಂಜಿಎಂ ಕಾಲೇಜು ಆವರಣದಲ್ಲಿರುವ ಟಿ.ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ ರವಿವಾರ ನಡೆಯಿತು.
ಸಮಾರೋಪ ನುಡಿಗಳನ್ನಾಡಿದ ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಂ.ಎಲ್.ಸಾಮಗ, ಭಜನೆ ಎಂಬುದು ಬಹಳ ಮುಖ್ಯ. ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ಧರ್ಮಗಳು ಇದನ್ನು ಪಾಲಿಸಬೇಕು. ಭಜನೆಯಿಂದ ಮನಸ್ಸು ನೆಮ್ಮದಿ, ಶಾಂತಿ ಹಾಗೂ ಏಕಾಗ್ರತೆ ಸಿಗಲು ಸಾಧ್ಯವಾಗುತ್ತದೆ. ಆದುದರಿಂದ ಪ್ರತಿದಿನ ಮನೆಗಳಲ್ಲಿ ಭಜನೆ ಹಾಡುವ ಮೂಲಕ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ ತ ಚಿಕ್ಕಣ್ಣ ಮಾತನಾಡಿದರು.
ಉಡುಪಿ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಸಂಚಾಲಕಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ರವಿರಾಜ್ ಎಚ್.ಪಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.