ಮಳೆಗಾಲಕ್ಕೂ ಮುನ್ನ ಭಟ್ಕಳ ಹೆದ್ದಾರಿ ಕಾಮಗಾರಿ ಪರಿಶೀಲನೆ: ನೀರು ಹರಿವಿಗೆ ಸಮರ್ಪಕ ವ್ಯವಸ್ಥೆ ಇಲ್ಲ ಎಂದ ಸಾರ್ವಜನಿಕರು
ಭಟ್ಕಳ: ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ನಾಲ್ಕು ಮಾರ್ಗ ಕಾಮಗಾರಿಯಿಂದ ನೀರು ನಿಲ್ಲುವ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗುವ ಆತಂಕ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಗುರುವಾರ ವಿವಿಧ ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವರೊಂದಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್, ಉಪವಿಭಾಗಾಧಿಕಾರಿ ಜೆ. ಮಹೇಶ್, ಡಿವೈಎಸ್ಪಿ ಗಿರೀಶ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಶೀಲನೆ ವೇಳೆ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹೆದ್ದಾರಿ ಮಧ್ಯಭಾಗದಲ್ಲಿ ದೊಡ್ಡ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ ಮಳೆ ನೀರು ಮುಂದೆ ಯಾವ ದಿಕ್ಕಿಗೆ ಹರಿಯಲಿದೆ ಎಂಬುದಕ್ಕೆ ಸಮರ್ಪಕ ಯೋಜನೆ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಂಗಿನಕಟ್ಟೆ, ನೂರ್ ಮಸೀದಿ ಎದುರು, ಬಸ್ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ಹರಿವಿಗೆ ಶಾಶ್ವತ ವ್ಯವಸ್ಥೆ ಇಲ್ಲದಿದ್ದರೆ ಮಳೆಗಾಲದಲ್ಲಿ ಸರ್ವಿಸ್ ರಸ್ತೆ ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಎಚ್ಚರಿಸಿದರು.
ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ಭಟ್ಕಳ ಸಿಟಿಜನ್ ಫೋರಂ ಅಧ್ಯಕ್ಷ ಸತೀಶ್ ಕುಮಾರ್ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಮಗ್ರ ನೀರು ಹರಿವಿನ ಯೋಜನೆ ರೂಪಿಸಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಮೂಡ ಭಟ್ಕಳ ಬೈಪಾಸ್ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯರು, ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಪೂರ್ಣಗೊಂಡು ಪರಿಹಾರ ಧನವನ್ನೂ ನೀಡಲಾಗಿದೆ. ಆದರೂ ಕಾಮಗಾರಿ ಹಾಗೂ ಚರಂಡಿ ವ್ಯವಸ್ಥೆ ಇನ್ನೂ ಆರಂಭವಾಗಿಲ್ಲ ಎಂದು ದೂರಿದರು.
ಕೋಟೇಶ್ವರ ರಸ್ತೆಯಲ್ಲಿ ನೀರು ಹರಿವಿಗೆ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದರು.
ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಸಚಿವ ಮಂಕಾಳ ವೈದ್ಯ, ತಾತ್ಕಾಲಿಕ ಪ್ರವಾಹ ಸಂಭವಿಸುವ ಪ್ರದೇಶ ಗಳಲ್ಲಿ ಜೆಸಿಬಿ ಯಂತ್ರಗಳ ಮೂಲಕ ತಕ್ಷಣ ನೀರು ಹರಿಯುವ ಮಾರ್ಗ ನಿರ್ಮಿಸಿ, ಮಳೆ ನೀರನ್ನು ಹಳ್ಳ, ತೋಡು ಹಾಗೂ ನೈಸರ್ಗಿಕ ಕಾಲುವೆಗಳ ಕಡೆಗೆ ಹರಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು. ಈ ಕಾಮಗಾರಿ ಶುಕ್ರವಾರದಿಂದಲೇ ಆರಂಭವಾಗಬೇಕು ಎಂದು ಅವರು ನಿರ್ದೇಶನ ನೀಡಿದರು.
ನಗರದ ಇತರೆ ಭಾಗಗಳಲ್ಲೂ ನೀರನ್ನು ಪುರಸಭೆ ಚರಂಡಿಗಳಿಗೆ ಸಂಪರ್ಕಿಸಿ, ಅಲ್ಲಿಂದ ನೈಸರ್ಗಿಕ ಜಲಮಾರ್ಗ ಗಳಿಗೆ ಹರಿಯುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ನದ್ವಿ, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶ್ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಬಾಬಾಸಾಹೇಬ್ ಮಾನೆ, ಅಲ್ತಾಫ್ ಖರೂರಿ, ಇಮ್ಷಾದ್ ಮುಖ್ತಸರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.