ಜಾಮಿಯಾ ಇಸ್ಲಾಮಿಯಾದ ಹಿರಿಯ ಅಂಧ ಶಿಕ್ಷಕ ಹಾಫಿಝ್ ಮೊಹಮ್ಮದ್ ಅಶ್ಫಾಕ್ ನಿಧನ
ಭಟ್ಕಳ: ಜಾಮಿಯಾ ಇಸ್ಲಾಮಿಯಾ ಭಟ್ಕಳದ ಹಿಫ್ಜುಲ್ ಕುರ್‌ಆನ್ ವಿಭಾಗದ ಹಿರಿಯ ಅಂಧ ಶಿಕ್ಷಕ ಹಾಫಿಝ್ ಮೊಹಮ್ಮದ್ ಅಶ್ಫಾಕ್ (ಚನ್ನಾ) ಅವರು ಮಂಗಳವಾರ ಸಂಜೆ ನಿಧನರಾದರು.
ಕಣ್ಣುಗಳೆರಡೂ ದೃಷ್ಟಿ ಕಳೆದುಕೊಂಡಿದ್ದರೂ ಕುರ್‌ಆನ್ ಕಂಠಪಾಠ ಬೋಧನೆ, ಧಾರ್ಮಿಕ ಶಿಕ್ಷಣ ಹಾಗೂ ವಿದ್ಯಾರ್ಥಿ ಗಳ ವ್ಯಕ್ತಿತ್ವ ರೂಪಿಸುವ ಕಾರ್ಯದಲ್ಲಿ ಸುಮಾರು 29 ವರ್ಷಗಳ ಕಾಲ ಅವರು ಸಲ್ಲಿಸಿದ ಸೇವೆ ಅಪಾರವಾಗಿದೆ. ಸಾರ್ವಜನಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ‘ನಾಬಿನಾ(ಅಂಧ) ಅಶ್ಫಾಕ್ ಸಾಹೇಬ’ ಎಂದೇ ಪರಿಚಿತರಾಗಿದ್ದ ಅವರು, ತಮ್ಮ ಸರಳತೆ, ಸೌಜನ್ಯ ಮತ್ತು ಸಮರ್ಪಿತ ಸೇವೆಯಿಂದ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮಂಗಳವಾರ ಎಂದಿನಂತೆ ಜಾಮಿಯಾಗೆ ಆಗಮಿಸಿ ಬೋಧನಾ ಕರ್ತವ್ಯ ನಿರ್ವಹಿಸಿದ್ದ ಅವರು, ಮಧ್ಯಾಹ್ನ ಅಸ್ವಸ್ಥ ಗೊಂಡ ಹಿನ್ನೆಲೆಯಲ್ಲಿ ಕೆಲಕಾಲ ವಿಶ್ರಾಂತಿ ಪಡೆದಿದ್ದರು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಾಣಿಸದ ಕಾರಣ ಅಸರ್ ನಮಾಜ್‌ಗೂ ಮುನ್ನ ಮನೆಗೆ ತೆರಳಿದ್ದರು. ನಂತರ ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಭಟ್ಕಳದ ವೆಲ್ ಫೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲು ಸಿದ್ಧತೆ ನಡೆಸುವ ವೇಳೆ ಆಂಬುಲೆನ್ಸ್‌ನಲ್ಲೇ ಅವರು ಕೊನೆಯುಸಿರೆಳೆದರು.
ಜಾಮಿಯಾ ಇಸ್ಲಾಮಿಯಾದಲ್ಲಿ ಸುಮಾರು 29 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರು, ನೂರಾರು ವಿದ್ಯಾರ್ಥಿಗಳಿಗೆ ಕುರ್‌ಆನ್ ಕಂಠಪಾಠ ಮಾಡಿಸಿ, ದೇಶ–ವಿದೇಶಗಳ ವಿವಿಧ ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಫಿಜ್‌ಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ನಿಧನವನ್ನು ಜಾಮಿಯಾ ಇಸ್ಲಾಮಿಯಾಗೆ ತುಂಬಲಾರದ ಶೈಕ್ಷಣಿಕ ಮತ್ತು ಧಾರ್ಮಿಕ ನಷ್ಟ ಎಂದು ಪರಿಗಣಿಸಲಾಗಿದೆ.
ಅವರ ನಿಧನದ ಹಿನ್ನೆಲೆಯಲ್ಲಿ ಬುಧವಾರ ಜಾಮಿಯಾ ಇಸ್ಲಾಮಿಯಾ ಹಾಗೂ ಅದರ ಅಧೀನದಲ್ಲಿರುವ ಎಲ್ಲ ಮಕ್ತಬ್‌ಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರದಿಂದ ಎಂದಿನಂತೆ ತರಗತಿಗಳು ಆರಂಭವಾಗಲಿವೆ ಎಂದು ಜಾಮಿಯಾ ಆಡಳಿತ ಮಂಡಳಿ ಪ್ರಕಟಿಸಿದೆ.