×
Ad

ಅತ್ಯುತ್ತಮ ಸೇವೆಗೆ ಭಟ್ಕಳದ ಇಬ್ಬರು ಪೊಲೀಸ್ ಸಿಬ್ಬಂದಿಗೆ ಪ್ರಶಂಸಾಪತ್ರ

Update: 2026-07-03 18:36 IST

ಭಟ್ಕಳ : ನ್ಯಾಯಾಲಯದಿಂದ ಹೊರಡಿಸಲಾದ ವಾರಂಟ್‌ಗಳು ಮತ್ತು ಸಮನ್ಸ್‌ಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ, ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಭಟ್ಕಳ ನಗರ ಪೊಲೀಸ್ ಠಾಣೆಯ ಸಿವಿಲ್ ಹೆಡ್ ಕಾನ್‌ಸ್ಟೆಬಲ್‌ಗಳಾದ ಗಿರೀಶ್ ಅಂಕೋಲೇಕರ್ ಹಾಗೂ ಉದಯ ನಾಯ್ಕ ಅವರಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಪ್ರಶಂಸಾಪತ್ರ ನೀಡಿ ಗೌರವಿಸಲಾಯಿತು.

ಕಾರವಾರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ಸಿಬ್ಬಂದಿಗೆ ಪ್ರಶಂಸಾಪತ್ರ ಪ್ರದಾನ ಮಾಡಲಾಯಿತು.

ಪ್ರಸಕ್ತ ವರ್ಷದಲ್ಲಿ ನ್ಯಾಯಾಲಯದಿಂದ ಹೊರಡಿಸಲಾದ ವಾರಂಟ್‌ಗಳು ಮತ್ತು ಸಮನ್ಸ್‌ಗಳ ಜಾರಿಗೊಳಿಸುವಿಕೆ ಹಾಗೂ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಸುಮಾರು 90 ಶೇಕಡಾ ಯಶಸ್ಸು ಸಾಧಿಸಿರುವುದನ್ನು ಪ್ರಶಂಸಾಪತ್ರದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಇವರ ಕಾರ್ಯಕ್ಷಮತೆಯಿಂದ ಅನೇಕ ಪ್ರಕರಣಗಳ ತನಿಖೆಗೆ ವೇಗ ದೊರೆತು, ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೂ ಮಹತ್ವದ ನೆರವು ಲಭಿಸಿದೆ ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಅವರು ಇಬ್ಬರು ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿ, ಕರ್ತವ್ಯನಿಷ್ಠೆ ಮತ್ತು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿ ಈ ಗೌರವಕ್ಕೆ ಪಾತ್ರರಾಗಿರುವುದು ಭಟ್ಕಳ ನಗರ ಪೊಲೀಸ್ ಠಾಣೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಮುಂದೆಯೂ ಇದೇ ಉತ್ಸಾಹದಿಂದ ಸಾರ್ವಜನಿಕ ಸೇವೆ ಮುಂದುವರಿಸುವಂತೆ ಶುಭ ಹಾರೈಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News