Bhatkal | ಅಪ್ರಾಪ್ತರಿಗೆ ಬೈಕ್ ನೀಡಿದ ಇಬ್ಬರಿಗೆ ತಲಾ 25 ಸಾವಿರ ರೂ. ದಂಡ
ಸಾಂದರ್ಭಿಕ ಚಿತ್ರ
ಭಟ್ಕಳ: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಪ್ರಕರಣದಲ್ಲಿ ಭಟ್ಕಳ ಹಿರಿಯ ಸಿವಿಲ್ ನ್ಯಾಯಾಲಯ ಇಬ್ಬರು ವಾಹನ ಮಾಲೀಕರಿಗೆ ತಲಾ 25 ಸಾವಿರ ರೂ. ದಂಡ ವಿಧಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಮುಹಮ್ಮದ್ ಯಾಸಿನ್ ಕಾಜಿಯಾ ಹಾಗೂ ಅಬ್ದುಲ್ಲಾ ರುಕ್ನುದ್ದೀನ್ ಅವರು ತಮ್ಮ ದ್ವಿಚಕ್ರ ವಾಹನಗಳನ್ನು ಅಪ್ರಾಪ್ತ ಬಾಲಕರಿಗೆ ಚಾಲನೆ ಮಾಡಲು ನೀಡಿದ್ದರು. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಉಪನಿರೀಕ್ಷಕ ಭರಮಪ್ಪ ಬೆಳಗಲಿ ಅವರು, ಮೋಟಾರು ವಾಹನ ಕಾಯ್ದೆಯ ಕಲಂ 5 ಹಾಗೂ 199(ಎ) ಅಡಿಯಲ್ಲಿ ಆರೋಪಪಟ್ಟಿಯನ್ನು ಭಟ್ಕಳ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಇಬ್ಬರು ವಾಹನ ಮಾಲೀಕರಿಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡುವ ಪೋಷಕರು ಹಾಗೂ ವಾಹನ ಮಾಲೀಕರ ವಿರುದ್ಧ ಮುಂದೆಯೂ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭಟ್ಕಳ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.