ಭಟ್ಕಳ: ಮುಟ್ಟಳ್ಳಿಯಲ್ಲಿ ರಕ್ತದಾನ ಶಿಬಿರ
ಭಟ್ಕಳ: ತಾಲೂಕಿನ ಮುಟ್ಟಳ್ಳಿಯಲ್ಲಿ ಶ್ರೀ ಕಟ್ಟೆವೀರ ಯುವಶಕ್ತಿ ಸಂಘ, ಕ್ರಿಯೇಟಿವ್ ಫ್ರೆಂಡ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 80 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಮುಟ್ಟಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಭಾಂಗಣದಲ್ಲಿ ನಡೆದ ಶಿಬಿರವನ್ನು ನಿವೃತ್ತ ಶಿಕ್ಷಕ ಹಾಗೂ ಹಿರಿಯ ಮುಖಂಡ ಎಂ.ಕೆ. ನಾಯ್ಕ ಉದ್ಘಾಟಿಸಿದರು. ರಕ್ತದಾನದಿಂದ ಅಗತ್ಯವಿರುವವರ ಜೀವ ಉಳಿಸಲು ಸಾಧ್ಯವಾಗಿದ್ದು, ಆರೋಗ್ಯವಂತರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ಫಿಜಿಷಿಯನ್ ಡಾ. ಪ್ರಕಾಶ ವಿ. ನಾಯ್ಕ ಮಾತನಾಡಿ, ರಕ್ತದಾನಕ್ಕೆ ಜಾತಿ, ಧರ್ಮ ಅಥವಾ ಯಾವುದೇ ಭೇದಭಾವ ಅಡ್ಡಿಯಾಗಬಾರದು. ಒಂದು ಯುನಿಟ್ ರಕ್ತವನ್ನು ವಿವಿಧ ಘಟಕಗಳಾಗಿ ವಿಂಗಡಿಸಿ ಹಲವು ರೋಗಿಗಳಿಗೆ ಬಳಸಬಹುದು ಎಂದರು.
ಆಡಳಿತ ವೈದ್ಯಾಧಿಕಾರಿ ಹಾಗೂ ಜನರಲ್ ಸರ್ಜನ್ ಡಾ. ಅರುಣಕುಮಾರ್ ಎನ್.ಎ. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಅರುಣಕುಮಾರ್ ಎನ್.ಎ. ಹಾಗೂ ಡಾ. ಪ್ರಕಾಶ ವಿ. ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ದಂತ ವೈದ್ಯ ಡಾ. ರವಿ ನಾಯ್ಕ, ಕಟ್ಟೆವೀರ ಯುವಶಕ್ತಿ ಸಂಘದ ಅಧ್ಯಕ್ಷ ಚಂದ್ರು ಕುಪ್ಪಯ್ಯ ನಾಯ್ಕ, ಕ್ರಿಯೇಟಿವ್ ಫ್ರೆಂಡ್ಸ್ ಸಂಘದ ಅಧ್ಯಕ್ಷ ಮಹೇಶ ನರಸಿಂಹ ನಾಯ್ಕ, ಕಟ್ಟೆವೀರ ದೇವಸ್ಥಾನದ ಅಧ್ಯಕ್ಷ ನಾರಾಯಣ ನಾಯ್ಕ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಡಾ. ಸ್ನೇಹಾ ಉಪಸ್ಥಿತರಿದ್ದರು.
ರಾಘವೇಂದ್ರ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಎನ್.ಜಿ. ಗೌಡ ಕಾರ್ಯಕ್ರಮ ನಿರೂಪಿಸಿದರು.