×
Ad

ಭಟ್ಕಳದಲ್ಲಿ ಮೇ 27ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಮುಂದುವರಿಕೆ

Update: 2026-05-26 23:43 IST

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಮುರಿನಕಟ್ಟೆ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಭಟ್ಕಳ ಉಪವಿಭಾಗದ ದಂಡಾಧಿಕಾರಿಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)–2023ರ ಕಲಂ 163ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ವೆಂಕಟಾಪುರ ಗ್ರಾಮದ ಸರ್ವೆ ನಂ. 88/209ರಲ್ಲಿರುವ ಮುರಿನಕಟ್ಟೆಯ ಧಾರ್ಮಿಕ ಸ್ಥಳವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಥಳಾಂತರಿಸುವ ವಿಚಾರವಾಗಿ ಇತ್ತೀಚೆಗೆ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲು ಮೇ 25ರಿಂದ ಮೇ 27ರ ಬೆಳಿಗ್ಗೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿತ್ತು. ಇದೀಗ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಪರಿಷ್ಕೃತ ಆದೇಶದಂತೆ ಮೇ 27ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಭಟ್ಕಳ ನಗರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ನಿಷೇಧಾಜ್ಞೆ ಅವಧಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಮತ್ತು ಪ್ರತಿಭಟನೆ ನಡೆಸುವುದು ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರ, ದಣ್ಣೆ, ಕತ್ತಿ, ಈಟಿ, ಗದೆ ಸೇರಿದಂತೆ ಹಿಂಸೆಗೆ ಕಾರಣ ವಾಗುವ ವಸ್ತುಗಳನ್ನು ಸಾಗಿಸುವುದಕ್ಕೂ ತಡೆ ವಿಧಿಸಲಾಗಿದೆ.

ಸ್ಫೋಟಕ ವಸ್ತುಗಳ ಸಾಗಾಟ, ಕಲ್ಲು ತೂರಾಟಕ್ಕೆ ಬಳಸಬಹುದಾದ ವಸ್ತುಗಳ ಸಂಗ್ರಹ ಮತ್ತು ಬಳಕೆಗೂ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕವಾಗಿ ಪ್ರಚೋದನಕಾರಿ ಘೋಷಣೆ ಕೂಗುವುದು ಅಥವಾ ಶಾಂತಿಗೆ ಭಂಗ ತರುವ ಚಟುವಟಿಕೆ ನಡೆಸುವುದನ್ನೂ ನಿಷೇಧಿಸಲಾಗಿದೆ. ಆದರೆ ಸರ್ಕಾರಿ ಕಾರ್ಯಕ್ರಮಗಳು ಹಾಗೂ ತುರ್ತು ವೈದ್ಯಕೀಯ ಸೇವೆಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.

ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಭಟ್ಕಳ ನಗರ ಠಾಣೆ ಪೊಲೀಸ್ ನಿರೀಕ್ಷಕರಿಗೆ ಸೂಚನೆ ನೀಡಲಾ ಗಿದೆ. ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News