×
Ad

1993ರ ಗಲಭೆ ಉಲ್ಲೇಖಿಸುವುದು ಜವಾಬ್ದಾರಿಯುತ ರಾಜಕಾರಣವಲ್ಲ: ವೆಂಕಟೇಶ್ ನಾಯ್ಕ

ನಾಗಬನ, ಮುರಿನಕಟ್ಟೆ ವಿಚಾರದಲ್ಲಿ ಬಿಜೆಪಿ ರಾಜಕೀಯ: ಕಾಂಗ್ರೆಸ್ ಆರೋಪ

Update: 2026-05-26 22:52 IST

ಭಟ್ಕಳ: ಶ್ರದ್ಧಾ ಕೇಂದ್ರವಾದ ಗುರುವಿನಕಟ್ಟೆ (ನಾಗಬನ) ಹಾಗೂ ಮುರಿನಕಟ್ಟೆ ವಿಚಾರದಲ್ಲಿ ಬಿಜೆಪಿ ನಾಯಕರು ಜನರ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಆರೋಪಿಸಿದರು.

ಮಂಗಳವಾರ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುರಿನಕಟ್ಟೆ ಹಿಂದೂಗಳ ಶ್ರದ್ಧಾ ಕೇಂದ್ರವಾಗಿದೆ. ಅದರ ಮರುನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ಅಥವಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿರೋಧಿಯಾಗಿದ್ದರೆ, ತಹಶೀಲ್ದಾರರ ಸಮ್ಮುಖದಲ್ಲೇ ಕಾಮಗಾರಿ ನಡೆಯುತ್ತಿರಲಿಲ್ಲ” ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ವೇಳೆ ಮುರಿನಕಟ್ಟೆ ತೆರವುಗೊಳಿಸಲಾದಾಗ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯದ್ದೇ ’ಡಬಲ್ ಇಂಜಿನ್’ ಸರ್ಕಾರವಿತ್ತು. ಆಗ ಶಾಸಕರಾಗಿದ್ದ ಸುನೀಲ್ ನಾಯ್ಕ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಈಗ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹಾಗೂ ಸಚಿವರ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಟೀಕಿಸಿದರು. “ಸರ್ಕಾರ ನಿರ್ಮಿಸಿದ್ದ ಪರ್ಯಾಯ ಕಟ್ಟೆಯನ್ನು ಕಿಡಿಗೇಡಿಗಳು ಧ್ವಂಸಗೊಳಿ ಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವರು ಈಗಾಗಲೇ ಸೂಚಿಸಿದ್ದಾರೆ” ಎಂದರು.

ನಾಗಬನ ವಿಚಾರದಲ್ಲಿಯೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, “ಕಾಂಗ್ರೆಸ್ ಸರ್ಕಾರವೇ ನಾಗಬನ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿತ್ತು. ನಾಲ್ಕು ಗುಂಟೆ ಜಾಗ ಬೇಕು ಎಂದು ಹೇಳಿದ್ದವರು ತಮ್ಮ ಆಡಳಿತಾವಧಿಯಲ್ಲಿ ಅರ್ಧ ಗುಂಟೆಯಲ್ಲಿ ಕಾಮಗಾರಿ ನಡೆಸಿದ್ದು ಏಕೆ?” ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕ ಗೋವಿಂದ ನಾಯ್ಕ ಅವರು ‘1993ರ ಪರಿಸ್ಥಿತಿ ಮರುಕಳಿಸಬಹುದು’ ಎಂಬ ಅರ್ಥದ ಹೇಳಿಕೆ ನೀಡಿರುವುದನ್ನು ಖಂಡಿಸಿದ ಕಾಂಗ್ರೆಸ್ ಮುಖಂಡರು, “ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು. ಸಂಘರ್ಷಗಳಲ್ಲಿ ಬಲಿಯಾಗುವುದು ಬಡವರ ಮಕ್ಕಳು, ನಾಯಕರ ಮಕ್ಕಳಲ್ಲ” ಎಂದು ಎಚ್ಚರಿಸಿದರು.

ಇತ್ತೀಚೆಗೆ ಸಂಭವಿಸಿದ ಜಲದುರಂತದಲ್ಲಿ 11 ಮಂದಿ ಮೃತಪಟ್ಟ ಸಂದರ್ಭದಲ್ಲೂ ಬಿಜೆಪಿ ಕಾರ್ಯಕರ್ತರು ಸಚಿವ ಮಂಕಾಳ ವೈದ್ಯ ವಿರುದ್ಧ ಘೋಷಣೆ ಕೂಗಿರುವುದು ಅಮಾನವೀಯ ಎಂದು ಅವರು ಹೇಳಿದರು. “ಸಚಿವರು ತುರ್ತು ಸಭೆಗಳನ್ನು ರದ್ದುಗೊಳಿಸಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಇಂತಹ ದುಃಖದ ಸಂದರ್ಭದಲ್ಲಿಯೂ ರಾಜಕೀಯ ಮಾಡಲಾಗಿದೆ” ಎಂದು ಆರೋಪಿಸಿದರು.

ಸುನೀಲ್ ನಾಯ್ಕ ಅವರು ದೇವಸ್ಥಾನಗಳ ಅಭಿವೃದ್ಧಿ, ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಸಾರ್ವಜನಿಕ ಕಾರ್ಯಗಳ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ವೆಂಕಟೇಶ ನಾಯ್ಕ, “ಜನರ ಧಾರ್ಮಿಕ ಭಾವನೆ ಗಳನ್ನು ಕೆರಳಿಸಿ ಚುನಾವಣಾ ಲಾಭ ಪಡೆಯುವುದು ಬಿಜೆಪಿಗೆ ಹೊಸದಲ್ಲ” ಎಂದರು.

ಪರೇಶ್ ಮೇಸ್ತ ಪ್ರಕರಣದಲ್ಲಿಯೂ ಬಿಜೆಪಿ ಸುಳ್ಳು ಪ್ರಚಾರದ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸಿತ್ತು ಎಂದು ಆರೋಪಿಸಿದ ಅವರು, “ಆ ಕುಟುಂಬಕ್ಕೆ ಬಿಜೆಪಿ ನೀಡಿದ ಕೊಡುಗೆ ಏನು?” ಎಂದು ಪ್ರಶ್ನಿಸಿದರು.

ನೀಟ್ ಪರೀಕ್ಷೆಯ ವೈಫಲ್ಯದಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳನ್ನು ಉಲ್ಲೇಖಿಸಿದ ಅವರು, “ಅದರ ಹೊಣೆ ಯಾರು ಹೊರುತ್ತಾರೆ?” ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಾ ಮೊಗೇರ, ಭಟ್ಕಳ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯ್ಕ, ನಾರಾಯಣ ನಾಯ್ಕ, ಟಿ.ಡಿ. ನಾಯ್ಕ, ರಮೇಶ್ ನಾಯ್ಕ, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ರಾಜು ನಾಯ್ಕ, ಸುಧಾ ನಾಯ್ಕ, ನಯನಾ ನಾಯ್ಕ, ಜಯಶ್ರೀ ಮೊಗೇರ, ಮಂಜುನಾಥ ನಾಯ್ಕ, ಭಾಸ್ಕರ ಮೊಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News