×
Ad

Karwar | ಬೈತಖೋಲ್ ಬಂದರಿನಲ್ಲಿ ಹಡಗಿನಿಂದ ಡಾಂಬರ್ ಸೋರಿಕೆ!

Update: 2026-07-12 19:38 IST

ಕಾರವಾರ: ಬೈತಖೋಲ್ ಬಂದರಿನಲ್ಲಿ ಅಲಿಗದ್ದಾದ ಕಂಪನಿಗೆ ಸೇರಿದ ಎಂ.ಟಿ. ಪದ್ಮನಾಭ್ ಹಡಗಿನಿಂದ ಡಾಂಬರ್ (ಬಿಟುಮೆನ್) ಸೋರಿಕೆಯಾಗಿರುವ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಬಂದರಿನೊಳಗೆ ಹಡಗಿನಿಂದ ಸಾಕಷ್ಟು ಪ್ರಮಾಣದಲ್ಲಿ ಡಾಂಬರ್ ಚೆಲ್ಲಿಕೊಂಡಿದ್ದು, ಅದರ ಒಂದು ಭಾಗ ಸಮುದ್ರಕ್ಕೂ ಸೇರಿರುವುದರಿಂದ ಸಮುದ್ರ ಮಾಲಿನ್ಯದ ಭೀತಿ ಎದುರಾಗಿದೆ.

ಒಮಾನ್‌ನ ಶಿನಾಸ್ ಬಂದರಿನಿಂದ 4,460.551 ಮೆಟ್ರಿಕ್ ಟನ್ ಬಿಟುಮೆನ್ ಹೊತ್ತು ಬಂದಿದ್ದ ಹಡಗಿನಿಂದ ಸರಕು ಇಳಿಸುವ ವೇಳೆ ಅಥವಾ ತಾಂತ್ರಿಕ ದೋಷದಿಂದ ಈ ಸೋರಿಕೆ ಸಂಭವಿಸಿದೆ ಎನ್ನಲಾಗುತ್ತಿದೆ. ಬಿಸಿಯಾದ ಡಾಂಬರ್ ಬಂದರಿನ ಪ್ರದೇಶದಲ್ಲಿ ಹರಡಿಕೊಂಡಿರುವುದರ ಜೊತೆಗೆ ಸಮುದ್ರದ ನೀರಿನಲ್ಲೂ ಬೆರೆತಿರುವ ಮಾಹಿತಿ ಲಭ್ಯವಾಗಿದೆ.

ಡಾಂಬರ್ ಸಮುದ್ರಕ್ಕೆ ಸೇರುವುದರಿಂದ ಮೀನು ಹಾಗೂ ಇತರ ಜಲಚರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಸಮುದ್ರದ ಮೇಲ್ಮೈಯಲ್ಲಿ ಡಾಂಬರ್ ಪದರ ರೂಪುಗೊಂಡರೆ ಸಣ್ಣ ದೋಣಿಗಳ ಸಂಚಾರಕ್ಕೂ ಅಡಚಣೆ ಉಂಟಾಗಬಹುದು. ಅಲ್ಲದೆ ಬೋಟ್‌ಗಳ ತಳಭಾಗಕ್ಕೆ ಡಾಂಬರ್ ಅಂಟಿಕೊಳ್ಳುವುದರಿಂದ ದೋಣಿ ಮಾಲಕರಿಗೆ ಆರ್ಥಿಕ ನಷ್ಟವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಈ ನಡುವೆ, ಸೋರಿಕೆಯಾದ ಡಾಂಬರ್ ತೆರವುಗೊಳಿಸಲು ಸಂಬಂಧಪಟ್ಟ ಏಜೆನ್ಸಿಗಳು ಸಮುದ್ರದಲ್ಲಿ ಸ್ವಚ್ಛತಾ ಕಾರ್ಯಾಚರಣೆ ಆರಂಭಿಸಿರುವ ಮಾಹಿತಿ ದೊರೆತಿದೆ. ಆದಾಗ್ಯೂ, ಸೋರಿಕೆಯ ಪ್ರಮಾಣ ಎಷ್ಟು, ಸಮುದ್ರಕ್ಕೆ ಎಷ್ಟು ಪ್ರಮಾಣದ ಡಾಂಬರ್ ಸೇರಿದೆ ಹಾಗೂ ಪರಿಸರದ ಮೇಲೆ ಅದರ ಪರಿಣಾಮ ಏನು ಎಂಬುದರ ಕುರಿತು ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News