ಕಾರವಾರ : ಮೀನುಗಾರಿಕಾ ಬೋಟ್‌ನಲ್ಲಿ ವಿಷಾನಿಲ ಸೋರಿಕೆ ; ಇಬ್ಬರು ಮೃತ್ಯು, ಐವರು ಅಸ್ವಸ್ಥ
ಕಾರವಾರ: ಮುದಗಾ ಬಂದರಿನಲ್ಲಿ ಮೀನುಗಾರಿಕಾ ಬೋಟ್‌ನಲ್ಲಿ ವಿಷಾನಿಲ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಐವರು ಅಸ್ವಸ್ಥಗೊಂಡಿದ್ದಾರೆ.
ಅಂಕೋಲಾ ತಾಲೂಕಿನ ಬೇಲೆಕೇರಿಗೆ ಸೇರಿದ ಮೂಕಾಂಬಿಕಾ ಬೋಟ್‌ನಲ್ಲಿ ಈ ಘಟನೆ ನಡೆದಿದೆ. ಒಡಿಶಾ ಮೂಲದ ಪುರಂದರ ಬಿಸರಾ (21) ಹಾಗೂ ಆಕಾಶ (24) ಮೃತಪಟ್ಟವರು. ಅಸ್ವಸ್ಥಗೊಂಡ ಐವರಿಗೆ ಚಿಕಿತ್ಸೆ ನೀಡಲಾಗಿದೆ.
ಬೋಟ್‌ನಲ್ಲಿ ಮೀನುಗಾರಿಕೆ ನಡೆಸಿ 'ಚಮನ್' ಮೀನು ಹಿಡಿದು ತರುವ ಸಂದರ್ಭದಲ್ಲಿ ಮೀನಿನಿಂದ ಹೊರಸೂಸಿದ ವಿಷಾನಿಲ ಸೇವಿಸಿ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.
ನಾಲ್ಕು ದಿನಗಳ ಹಿಂದೆ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಇದೇ ರೀತಿಯ ಘಟನೆಯಲ್ಲಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಇದೀಗ ಮತ್ತಿಬ್ಬರು ಕಾರ್ಮಿಕರು ಮೃತಪಟ್ಟಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿಸಿದೆ. ವಾರದೊಳಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ.