NEET ಅಕ್ರಮ ವಿರೋಧಿಸಿ ಹೊಸಪೇಟೆಯಲ್ಲಿ ಎಐಡಿಎಸ್‌ಒ ಪ್ರತಿಭಟನೆ; ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ತೀವ್ರ ಆಕ್ರೋಶ

Update: 2026-07-22 23:26 IST

ಹೊಸಪೇಟೆ/ ವಿಜಯನಗರ : ನೀಟ್ (NEET-UG) ಪರೀಕ್ಷೆಯಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೊಲೀಸರು ನಡೆಸಿದರೆಂದು ಆರೋಪಿಸಲಾದ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ಸೇರಿದಂತೆ ದೌರ್ಜನ್ಯವನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (AIDSO) ವಿಜಯನಗರ ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ಹೊಸಪೇಟೆಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ಬಳಿಕ ಹೊಸಪೇಟೆ ತಹಶೀಲ್ದಾರರ ಮೂಲಕ ದೇಶದ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ರವಿಕಿರಣ್ ಜೆ.ಪಿ., ವೈದ್ಯರಾಗುವ ಕನಸು ಹೊತ್ತು ವರ್ಷಪೂರ್ತಿ ಶ್ರಮಿಸುವ ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಭ್ರಷ್ಟ ವ್ಯವಸ್ಥೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು. ಪೋಷಕರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮಕ್ಕಳನ್ನು ಕೋಚಿಂಗ್‌ಗೆ ಕಳುಹಿಸುತ್ತಿದ್ದರೂ, ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ತಮ್ಮ ಹಕ್ಕು ಹಾಗೂ ಭವಿಷ್ಯಕ್ಕಾಗಿ ಶಾಂತಿಯುತವಾಗಿ ಹೋರಾಟ ನಡೆಸಿದ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ಪರೀಕ್ಷಾ ಅಕ್ರಮಗಳಿಗೆ ಕಾರಣವಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸವನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಯು. ಉಮಾದೇವಿ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ವೈಷ್ಣವಿ, ಸೈಯದ್ ಸಮೀರ್, ಮೀನಾಕ್ಷಿ, ನಿರ್ಮಲ ಶ್ರೀನಿವಾಸ್, ಹುಲಿಗೆಮ್ಮ, ವಿದ್ಯಾಶ್ರೀ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News